

ಬೆಂಗಳೂರು ಗ್ರಾಮಾಂತರ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದೊಂದಿಗೆ ಖಾಸಗಿ ಸಹಭಾಗಿತ್ವವೂ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಎಂ1 ಪೌಂಢೇಷನ್‌ನಂತೆ ಎಲ್ಲರೂ ಕೈ ಜೋಡಿಸಿದರೆ ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ತಾಲೂಕು ಆಲಪ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿರುವ ಗ್ರಂಥಾಲಯ ಮತ್ತು ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯವರು ಸಮಾಜಮುಖಿ ಕಳಕಳಿಯಿಂದ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿದ್ದಾರೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಿ ನೂತನ ಗ್ರಂಥಾಲಯ ಮತ್ತು ಕೊಠಡಿಗಳನ್ನು ನಿರ್ಮಿಸಿ ಶಾಲೆಯನ್ನು ಮೇಲ್ದರ್ಜೆಗೇರಿಸಿದ್ದಾರೆ. ಜತೆಗೆ ತಾಲೂಕಿನಾದ್ಯಂತ ಹೈ ಮಾಸ್ಟ್ ಲೈಟ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿಗೊಳ್ಳುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.