ಜಿಲ್ಲೆಯ ಜನರ ಅನುಕೂಲಕ್ಕೆ ಕಚೇರಿ

sudakar office
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಸುಗಮವಾಗಿಸುವ ಸಲುವಾಗಿ ಸಂಸದರ ಕಚೇರಿಯನ್ನು ತೆರೆಯಲಾಗಿದೆ, ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬಹುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ದೇವನಹಳ್ಳಿ ತಾಲೂಕು ಚಪ್ಪರದಕಲ್ಲಿನಲ್ಲಿರುವ ಜಿಲ್ಲಾಡಳಿತಭವನದಲ್ಲಿ ಸಂಸದರ ಕಚೇರಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಚೇರಿ ಆರಂಭವಾಗಿದೆ, ಗ್ರಾಮಾಂತರ ಜಿಲ್ಲೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಂಸದರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಎರಡೂ ಜಿಲ್ಲೆಗಳನ್ನು ಪ್ರತಿನಿಧಿಸುವುದರಿಂದ ಗ್ರಾಮಾಂತರ ಜಿಲ್ಲೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದು ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಸೋಮವಾರ ಲಭ್ಯ: ಕಲಾಪಕ್ಕೆ ಭಾಗವಹಿಸುವ ದಿನಗಳನ್ನು ಹೊರತುಪಡಿಸಿ, ಪ್ರತಿ ಸೋಮವಾರ ಅರ್ಧ ದಿನ ಈ ಕಚೇರಿಯಲ್ಲಿ ಲಭ್ಯವಿರುತ್ತೇನೆ. ಉಳಿದಂತೆ ನನ್ನ ಆಪ್ತ ಸಹಾಯಕರು ಪ್ರತಿದಿನ ಕಚೇರಿಯಲ್ಲಿ ಲಭ್ಯವಿದ್ದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಸುಧಾಕರ್ ತಿಳಿಸಿದರು. ಸಾರ್ವಜನಿಕ ಸಮಸ್ಯೆಗಳು ಅಹವಾಲುಗಳನ್ನು ಆಲಿಸಿ ಅವುಗಳನ್ನು ಪರಿಹರಿಸುವುದು ಜನಪ್ರತಿನಿಧಿಯಾದ ನನ್ನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು. ಈ ಹಿಂದಿನ ಯಾವುದೇ ಸಂಸದರು ಜಿಲ್ಲೆಯಲ್ಲಿ ಸಂಸದರ ಕಚೇರಿ ಆರಂಭಿಸಿರಲಿಲ್ಲ. ಇದೇ ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗಿದೆ. ಇದರ ಕಾರ್ಯಚಟುವಟಿಕೆ ಅಚ್ಚುಕಟ್ಟಾಗಿ ನಡೆಯಬೇಕು ಜತೆಗೆ ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಬೇಕು ಎಂಬ ಸದುದ್ದೇಶವಿದೆ ಎಂದು ಹೇಳಿದರು. ಕಚೇರಿಯಲ್ಲಿ ನಾನು ಲಭ್ಯವಿಲ್ಲದಿದ್ದರೂ ನನ್ನ ಆಪ್ತ ಕಾರ್ಯದರ್ಶಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನ ಲಭ್ಯವಿರುತ್ತಾರೆ ಯಾವುದೇ ಸಮಸ್ಯೆ ಅಹವಾಲು ಇದ್ದರೂ ಅರ್ಜಿ ಮೂಲಕ ಕಾರ್ಯದರ್ಶಿಗೆ ನೀಡಿ ಅವರಿಗೆ ಅರ್ಜಿ ನೀಡಿದರೆ ನನಗೆ ಖುದ್ದು ನೀಡಿದಂತೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು. ನಾನು ಕಚೇರಿಯಲ್ಲಿ ಲಭ್ಯವಿರುವ ಬಗ್ಗೆ ಜಾಲತಾಣ, ಮಾಧ್ಯಮಗಳ ಮೂಲಕ ತಿಳಿಸುತ್ತಿರುತ್ತೇನೆ ಸಾರ್ವಜನಿಕ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

ಹೂ ಗುಚ್ಛ ನೀಡಿ ಸ್ವಾಗತ: ಸಂಸದರ ಕಚೇರಿ ಉದ್ಘಾಟನೆ ವೇಳೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸಂಸದರಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು. ಸ್ಥಳೀಯ ಬಿಜೆಪಿ ಮುಖಂಡರು ಹೂವಿನ ಹಾರ ಹಾಕಿ ಸ್ವಾಗತಿಸಿದರು, ಸಂಸದರು ಟೇಪ್ ಕತ್ತರಿಸಿ ಪೂಜೆ ಸಲ್ಲಿಸುವ ಮೂಲಕ ಕಚೇರಿಗೆ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net