ಮೇವಿನ ಸಮಸ್ಯೆ ನೀಗಿಸಲು ಕ್ರಮ

sharath
Inauguration
Published on

  • ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ತಾಲೂಕಿನಲ್ಲಿ ಪ್ರತಿನಿತ್ಯ ಒಂದು ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಹಾಲು ಉತ್ಪಾದನೆ ಏರಿಕೆ ಜತೆಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಬೆಂಗಳೂರು ಹಾಲು ಒಕ್ಕೂಟದಲ್ಲಿ ಹೊಸಕೋಟೆ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
    ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮೇಡಿಮಲ್ಲಸಂದ್ರದ ಹೊಸಮನೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಸಿ ಮಾತನಾಡಿದರು.
    ತಾಲೂಕಿನಲ್ಲಿರುವ 203 ಹಾಲು ಉತ್ಪಾದಕರ ಸಹಕಾರ ಸಂಘಗಳು ಲಾಭದಾಯಕವಾಗಿ ನಡೆಯುತ್ತಿದೆ. ಹೈನುಗಾರಿಕೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಶೇ.3 ವಾರ್ಷಿಕ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿವರೆಗೆ ಸಾಲ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.
    ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 7 ಸಾವಿರ ಮೇವಿನ ಕಿಟ್ ವಿತರಣೆ ಮಾಡಲಾಗಿದೆ. ರಾಜ್ಯದಲ್ಲಿಯೇ ಅತಿಹೆಚ್ಚು 230 ಮೇವು ಕತ್ತರಿಸುವ ಯಂತ್ರಗಳು ತಾಲೂಕಿಗೆ ಮಂಜೂರಾಗಿದ್ದು, ಈಗಾಗಲೇ ರೈತರಿಗೆ ವಿತರಣೆ ಸಹ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ವಿವಿಧ ಸೌಲಭ್ಯ ವಿತರಣೆ, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು ಸೇರಿ ಹಲವು ರೀತಿಯಲ್ಲಿ ಸಹಕಾರ ನೀಡಲಾಗುತ್ತಿದ್ದು, ಹೈನುಗಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳ ಜತೆ ಸರ್ಕಾರ ನಿಲ್ಲಲಿದೆ ಎಂದು ತಿಳಿಸಿದರು.
    ಪಶು ಇಲಾಖೆ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ಅನುಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಸಂತೋಷ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ರೆಡ್ಡಿ, ಮುಖಂಡರಾದ ಭೋದನಹೊಸಹಳ್ಳಿ ಪ್ರಕಾಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net