

ಕೊಟ್ಟೂರು: ಮಲ್ಲನಾಯ್ಕನಹಳ್ಳಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಸಮರ್ಪಕ ಪಡಿತರ ವಿತರಣೆಯಾಗುತ್ತಿಲ್ಲ ಎಂದು ಮೋತಿಕಲ್ಲು ತಾಂಡಾದ ನಿವಾಸಿಗಳು ಗುರುವಾರ ಪ್ರತಿಭಟನೆ ಮಾಡಿದರು.
ತಹಸೀಲ್ದಾರ್ ಕಚೇರಿಗೆ 20ಕ್ಕೂ ಹೆಚ್ಚು ನಿವಾಸಿಗಳು ಆಗಮಿಸಿ ಮಲ್ಲನಾಯ್ಕನಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ವಿತರಣೆಯಾಗುತ್ತಿಲ್ಲ ಎಂದು ತಹಸೀಲ್ದಾರ್ ಜಿ.ಕೆ. ಅಮರೇಶ ಅವರಿಗೆ ದೂರು ಸಲ್ಲಿಸಿದರು. ಪ್ರತಿ ತಿಂಗಳು 28-29ರಂದು ಕೆವೈಸಿ ಕೊಡಲು ನ್ಯಾಯಬೆಲೆ ಅಂಗಡಿಗೆ ಹೋಗಬೇಕು. ಈ ದಿನಾಂಕವನ್ನು ಹೊರತು ಪಡಿಸಿ ಬೇರೆ ದಿನದಂದು ಹೋದರೆ ಸರ್ವರ್ ಸಮಸ್ಯೆ ಹಾಗೂ ಇತರೆ ಕಾರಣ ನೀಡಿ ನಮ್ಮ ತಂಬ್ ತೆಗೆದುಕೊಳ್ಳುವುದಿಲ್ಲ.
ಪ್ರತಿ ತಿಂಗಳು ಕೊನೆ ದಿನಾಂಕದಂದು ಮಾತ್ರ ಪಡಿತರ ವಿತರಿಸುತ್ತಾರೆ. ಇವರ ತೂಕದಲ್ಲಿಯೂ ವ್ಯತ್ಯಾಸವಿರುತ್ತದೆ. ನಂತರದ ದಿನಗಳಲ್ಲಿ ಪಡಿತರವನ್ನು ವಿತರಿಸುವುದಿಲ್ಲ. ಅಕ್ಕಿ ಮತ್ತು ರಾಗಿಯನ್ನು ಸರಿಯಾಗಿ ವಿತರಣೆ ಮಾಡದೆ ಇಲ್ಲ ಸಲ್ಲದ ಕಾರಣ ಕೊಡುತ್ತಾರೆ. ಪಡಿತರ ಪಡೆಯಲು ಮೂರು ನಾಲ್ಕು ಸಾರಿ ನ್ಯಾಯಬೆಲೆ ಅಲೆದಾಡಬೇಕಾಗುತ್ತದೆ ಎಂದು ದೂರಿದರು.