

ಅರಕೇರಾ: ಒಂದು ವಾರದಿಂದ ನಿರಂತರ ವಿದ್ಯುತ್ ಕಡಿತವಾಗುತ್ತಿದ್ದು, ಸಮರ್ಪಕ ಸರಬರಾಜು ಮಾಡುವಲ್ಲಿ ತಾತ್ಸಾರ ಮಾಡಲಾಗುತ್ತಿದೆ ಎಂದು ರೈತರು ಜುಟಮರಡಿ 33 ಕೆವಿ ಸ್ಟೇಷನ್‌ಗೆ ಗುರುವಾರ ಮುತ್ತಿಗೆ ಹಾಕಿದರು.
ಸಮಯ ನಿಗದಿ ಇಲ್ಲದೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹತ್ತಿ, ಭತ್ತ, ತೊಗರಿ, ಮೆಣಸಿನಕಾಯಿ ಸೇರಿ ವಿವಿಧ ತರಕಾರಿ ಬೆಳೆದಿದ್ದೇವೆ. ಬೆಳೆಗಳಿಗೆ ನೀರು ಹರಿಸಲು ಕೊಳವೆಬಾವಿ ಅವಲಂಬಿಸಿದ್ದೇವೆ.
ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ಕೊಳವೆಬಾವಿಗಳಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಹರಸಾಹಸ ಪಡಬೇಕಿದೆ ಎಂದು ದೂರಿದರು.
ಮಳೆ ಬಾರದಿರುವುದು ಕೂಡ ಸಮಸ್ಯೆಯಾಗಿದೆ. ಇದರಿಂದಾಗಿ ಸಂಪೂರ್ಣವಾಗಿ ವಿದ್ಯುತ್ ಮೇಲೆ ಅವಲಂಬಿತರಾಗಿದ್ದೇವೆ. ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ದಿವಾಳಿಯಾಗುತ್ತಿದ್ದೇವೆ.
ಕೃಷಿ ಜಮೀನುಗಳಿಗೆ ನಿತ್ಯ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ, 1 ರಿಂದ 2 ಗಂಟೆ ನೀಡಲಾಗುತ್ತಿದೆ ಎಂದು ದೂರಿದರು.
ಜೆಇ ನಜೀರ್ ಸಾಬ್ ಮಾತನಾಡಿ, ಜುಟಮರಡಿ 33 ಕೆವಿ ಸ್ಟೇಷನ್‌ಗೆ ಹೆಚ್ಚಿನ ಲೋಡ್ ಇರುವುದರಿಂದ ರೈತರ ಬೇಡಿಕೆಯಷ್ಟು ವಿದ್ಯುತ್ ಪೂರೈಕೆ ಮಾಡುವಲ್ಲಿ ವ್ಯತ್ಯಯವಾಗುತ್ತಿದೆ. ಇನ್ನೂ ಹೆಚ್ಚಿನ ಉಪ ಕೇಂದ್ರಗಳ ಅಗತ್ಯವಿದೆ.
ದೇವದುರ್ಗದಿಂದ ಸರಬರಾಜು ಆಗುವ ಮೇನ್ ಲೈನ್‌ನಲ್ಲಿ ಅಡಚಣೆ ಉಂಟಾಗುತ್ತಿದೆ. ರೈತರಿಗೆ ಸಮಸ್ಯೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.