ಗ್ರಾಮ ಪಂಚಾಯಿತಿಗಳಲ್ಲಿ ಇ-ತೆರಿಗೆ ವ್ಯವಸ್ಥೆ ಜಾರಿ

Published on

ಬೆಳಗಾವಿ: ಹಲವು ದಶಕಗಳಿಂದ ಸವಾಲಾಗಿರುವ ಗ್ರಾಮ ಪಂಚಾಯಿತಿ ತೆರಿಗೆ ವಸೂಲಿ, ಸೋರಿಕೆ ತಡೆ ಸಮಸ್ಯೆ ಇತ್ಯರ್ಥಕ್ಕೆ ‘ಇ-ತೆರಿಗೆ’ ವ್ಯವಸ್ಥೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ತೆರಿಗೆ ಸಂಗ್ರಹ ಪ್ರಮಾಣ ಶೇ.35 ಹೆಚ್ಚುವ ಸಾಧ್ಯತೆ ಇದೆ.

ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕಟ್ಟಡ, ವಾಣಿಜ್ಯ ಕಟ್ಟಡ, ಕೈಗಾರಿಕೆ, ಖಾಲಿ ಜಮೀನು, ಜಾಹೀರಾತು ಸೇರಿ ಎಲ್ಲ ವಿಧದ ತೆರಿಗೆಯನ್ನು ಕೆಲವೊಮ್ಮೆ ಸಂಗ್ರಹಿಸಿ ಮಗದೊಮ್ಮೆ ಕೈ ಬಿಡಲಾಗುತ್ತಿತ್ತು. ಇದರಿಂದಾಗಿ ತೆರಿಗೆ ಸಂಗ್ರಹಕ್ಕೆ ಭಾರಿ ಹೊಡೆತ ಬಿದ್ದು, ಗ್ರಾಮೀಣ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ನೂತನ ಇ-ತೆರಿಗೆ ನೀತಿ ಜಾರಿಗೊಳಿಸಲು ಸರ್ಕಾರ ಕ್ರಮ ವಹಿಸಿದೆ. ಅಲ್ಲದೆ, ಎಲ್ಲ ಗ್ರಾಪಂಗಳಿಗೆ ತೆರಿಗೆ ಸಂಗ್ರಹಿಸಲು ಆನ್‌ಲೈನ್ ಸೌಲಭ್ಯವುಳ್ಳ ಪಿಒಎ್ ಯಂತ್ರಗಳನ್ನೂ ವಿತರಿಸಿದೆ.

ಸ್ಥಳೀಯ ಸಂಪನ್ಮೂಲಗಳಿಂದಲೇ ನಡೆಯಬೇಕಿರುವ ಗ್ರಾಪಂಗಳಿಗೆ ತೆರಿಗೆ ಸಂಗ್ರಹ ಮುಖ್ಯವಾಗಿದೆ. ಆದರೆ, ಪ್ರತಿ ವರ್ಷ ತೆರಿಗೆ ಸಂಗ್ರಹ ಪ್ರಮಾಣ ಶೇ. 40 ದಾಟುತ್ತಿಲ್ಲ. ನೀರಿನ ಕರ ಮತ್ತು ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಬೆರಳೆಣಿಕೆಯಷ್ಟಿದೆ. ಇ-ತೆರಿಗೆ ವ್ಯವಸ್ಥೆ ಜಾರಿಯಿಂದಾಗಿ ಪ್ರಸ್ತುತ ಸಂಗ್ರಹವಾಗುತ್ತಿರುವ ವಾರ್ಷಿಕ 25ರಿಂದ 30 ಕೋಟಿ ರೂ. ತೆರಿಗೆ 50 ರಿಂದ 60 ಕೋಟಿ ರೂ.ಗೆ ಹೆಚ್ಚುವ ಸಾಧ್ಯತೆ ಇದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಇದು ಸಹಕಾರಿಯಾಗಲಿದೆ. ಅಲ್ಲದೆ, ಗ್ರಾಪಂಗಳ ಆರ್ಥಿಕ ಸಬಲೀಕರಣ, ಸಂಪನ್ಮೂಲ ಸೃಷ್ಟಿಗೆ ಮಾರ್ಗ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಜತೆಗೆ ಗ್ರಾಮ ಮಟ್ಟದಲ್ಲಾಗುತ್ತಿರುವ ಅಕ್ರಮ, ತೆರಿಗೆ ಸೋರಿಕೆ ಮತ್ತು ಅವೈಜ್ಞಾನಿಕ ತೆರಿಗೆ ಸಂಗ್ರಹಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ.

ಜಿಲ್ಲೆಯ 504 ಗ್ರಾಪಂಗಳಿಂದ ವಾರ್ಷಿಕ 40ರಿಂದ 48 ಕೋಟಿ ರೂ. ತೆರಿಗೆ ವಸೂಲಿ ಗುರಿ ಇದೆ. ಆದರೆ, ವಸೂಲಿ ಆಗುವುದು ಕೇವಲ 25 ರಿಂದ 30 ಕೋಟಿ ರೂ.. ಹತ್ತು ವರ್ಷಗಳಿಂದ ಗ್ರಾಪಂಗಳ ವ್ಯಾಪ್ತಿಯಲ್ಲಿನ ಆಸ್ತಿಗಳ ತೆರಿಗೆ ಪರಿಷ್ಕರಣೆ ಆಗಿಲ್ಲ. ಗ್ರಾಪಂ ತೆರಿಗೆ ಸಂಗ್ರಹಿಸಿದ ಹಣದಲ್ಲಿ ಶೇ.40 ಸಿಬ್ಬಂದಿ ವೇತನ ಪಾವತಿಸಬೇಕಿದೆ. ಆದರೆ ಈಗ ಗ್ರಾಪಂಗಳಲ್ಲಿ ಸಿಬ್ಬಂದಿ ಹೆಚ್ಚಾಗಿದ್ದು, ವೇತನ ಮಿತಿ ಶೇ. 40ಕ್ಕಿಂತ ಹೆಚ್ಚಾಗಿದೆ. ಪರಿಣಾಮ ಗ್ರಾಪಂಗಳಲ್ಲಿನ ಸಿಬ್ಬಂದಿ ವೇತನ, ಇನ್ನಿತರ ಖರ್ಚು ವೆಚ್ಚಗಳಿಗೆ ಆರ್ಥಿಕ ಸಮಸ್ಯೆ ಉಂಟಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ಹಣ ದುರ್ಬಳಕೆಯೇ ಹೆಚ್ಚು

ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ವಸೂಲಿ ಮಾಡುತ್ತಿರುವ ಗ್ರಾಪಂ ಸಿಬ್ಬಂದಿ ತೆರಿಗೆ ಹಣವನ್ನು ಪ್ರತಿದಿನ ಗ್ರಾಪಂ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಿಲ್ಲ. ಮೂರು ದಿನಕ್ಕೊಮ್ಮೆ ಇಲ್ಲವೆ, ವಾರಕ್ಕೊಮ್ಮೆ ಜಮೆ ಮಾಡುತ್ತಿದ್ದಾರೆ. ಇದರಿಂದಾಗಿ ಸಂಗ್ರಹವಾದ ತೆರಿಗೆ ಹಣ ಅಲ್ಲಲ್ಲಿ ಸೋರಿಕೆಯಾಗುತ್ತಿದೆ. ಕೆಲ ಭಾಗಗಳಲ್ಲಿ ತೆರಿಗೆ ವಸೂಲಿ ಮಾಡುವ ಸಿಬ್ಬಂದಿ ಜನರಿಗೆ ರಸೀದಿ ನೀಡಲು ಒಂದು ಪುಸ್ತಕ, ಗ್ರಾಪಂ ಕಚೇರಿಗೆ ತೋರಿಸಲು ಇನ್ನೊಂದು ರಸೀದಿ ಹೀಗೆ ಎರಡೆರಡು ಪುಸ್ತಕ ನಿರ್ವಹಿಸುತ್ತಿದ್ದಾರೆ. ಕೆಲವರು ತೆರಿಗೆ ಕಟ್ಟಿದ್ದರೂ ಗ್ರಾಪಂಗಳ ದಾಖಲೆಗಳಲ್ಲಿ ತೆರಿಗೆ ಬಾಕಿ ಉಳಿದುಕೊಂಡಿರುತ್ತದೆ. ಈ ಬಗ್ಗೆ ಪರಿಶೀಲಿಸಿದಾಗ ತೆರಿಗೆ ವಸೂಲಿಗಾರರು ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇ-ತೆರಿಗೆ ಪದ್ಧತಿ ಅದಕ್ಕೆ ಕಡಿವಾಣ ಹಾಕಲಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಇ-ತೆರಿಗೆ ಪದ್ಧತಿ ಜಾರಿಗೊಳಿಸಲಾಗಿದೆ. ತೆರಿಗೆ ಸಂಗ್ರಹಕ್ಕೆ ಪಿಒಎ್ ಯಂತ್ರಗಳನ್ನೂ ವಿತರಿಸಲಾಗಿದೆ. ತೆರಿಗೆ ಸಂಗ್ರಹ ಸಿಬ್ಬಂದಿ, ಪಿಡಿಒಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ.| ಹರ್ಷಲ್ ಭೋಯರ್ ಜಿಪಂ ಸಿಇಒ, ಬೆಳಗಾವಿ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಗ್ರಾಪಂಗಳಿಗೆ ವಿತರಣೆಯಾಗಿರುವ ಪಿಒಎ್ ಯಂತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net