

ಸೊರಬ: ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವಿನ ಆಂತರಿಕ ತಿಕ್ಕಾಟದಿಂದ ಸದ್ದು ಮಾಡಿದ್ದ ತಾಲೂಕಿನ ಉಳವಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಭಿನ್ನಮತ ಹೊರ ಹಾಕಿ ಕಣಕ್ಕೆ ಇಳಿದಿದ್ದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಪ್ರಮುಖರ ಸೂಚನೆ ಮೇರೆಗೆ ಕಣಕ್ಕೆ ಇಳಿದಿದ್ದ ಹುರಿಯಾಳುಗಳು ನಿರಾಸೆ ಅನುಭವಿಸಿದ್ದಾರೆ.
ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿತರಲ್ಲಿ ಆಂತರಿಕವಾಗಿ ಭಿನ್ನಾಭಿಪ್ರಾಯ ಮೂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಸ್.ಪ್ರೇಮಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಜಿ.ಪ್ರಶಾಂತ್ ಸ್ಪರ್ಧಿಸುವಂತೆ ಪ್ರಮುಖರು ಸೂಚನೆ ನೀಡಿದ್ದಾರೆ. ಆದರೆ ಇದನ್ನು ವಿರೋಧಿಸಿ ಕಾಂಗ್ರೆಸ್ ಬೆಂಬಲಿತರ ಕಣದಲ್ಲೇ ಕಾಣಿಸಿಕೊಂಡಿದ್ದ ಸರಸ್ವತಿ ಅಧ್ಯಕ್ಷ ಸ್ಥಾನಕ್ಕೆ, ತನ್ವೀರ್ ಅಹಮ್ಮದ್ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕೆ ಇಳಿದಿದ್ದರು.
ಏಳು ಮತಗಳನ್ನು ಪಡೆದ ಸರಸ್ವತಿ ಅಧ್ಯಕ್ಷೆಯಾಗಿ ಆಯ್ಕೆಗೊಂಡರೆ, ಪ್ರೇಮಾ 2 ಮತಗಳನ್ನಷ್ಟೇ ಪಡೆದರು. ತನ್ವೀರ್ ಅಹಮ್ಮದ್ ಸಹ 7 ಮತ ಪಡೆದು ಉಪಾಧ್ಯಕ್ಷ ಪಟ್ಟಕ್ಕೇರಿದರೆ, ಎದುರಾಳಿ ಡಿ.ಜಿ.ಪ್ರಶಾಂತ್ ಎರಡು ಮತ ಪಡೆಯುವಲ್ಲಿ ಸಫಲರಾದರು. ಬಿಜೆಪಿ ಬೆಂಬಲಿತ ಮೂವರೂ ಸದಸ್ಯರು ಮತದಾನ ಪ್ರಕ್ರಿಯೆಯಿಂದ ದೂರು ಉಳಿದರು.
ಚುನಾವಣಾಧಿಕಾರಿ ಆಗಿ ಉಳವಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ. ಪ್ರಜ್ವಲ್ ಕುಮಾರ್ ಕಾರ್ಯ ನಿರ್ವಹಿಸಿದರು. ಪಿಡಿಒ ಎಸ್. ರವಿಚಂದ್ರನ್ ಹಾಗೂ ಸಂದೇಶ್ ಕುಮಾರ್ ಸಹಕರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಗ್ರಾಪಂ ಸದಸ್ಯರಾದ ಮಂಜಮ್ಮ ಶ್ರೀಧರ್, ಕೆ.ಪರಶುರಾಮ, ರೇಖಾ ಅಣ್ಣಪ್ಪ, ಚಂದ್ರಕಲಾ, ನಾಗರತ್ನಾ, ದೂಗೂರು ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ, ಪ್ರಮುಖರಾದ ನಾಗರಾಜ ಕೈಸೋಡಿ, ಹನೀಫ್ ಸಾಬ್, ಭಾಸ್ಕರ ಬರಗಿ, ಯು.ಫಯಾಜ್ ಅಹ್ಮದ್ ಸೊರಬ, ಯೋಗೇಶ್ ಪತ್ರೆಸಾಲು, ಬಂಗಾರಪ್ಪ ಕೈಸೋಡಿ, ಭೋಜಪ್ಪ ಕೈಸೋಡಿ, ರಾಮಪ್ಪ ಉಳವಿ, ನಾಗಾರ್ಜುನ ಕಾನಹಳ್ಳಿ ಇತರರಿದ್ದರು.
ಮೂವರು ಸದಸ್ಯರ ಉಚ್ಚಾಟನೆ
ಕಾಂಗ್ರೆಸ್ ಆದೇಶ ತಿರಸ್ಕರಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಉಳವಿ ಗ್ರಾಪಂನ ಮೂವರು ಕಾಂಗ್ರೆಸ್ ಬೆಂಬಲಿತ ಸದಸ್ಯರು ಮತ್ತು ಇಬ್ಬರು ಕಾರ್ಯಕರ್ತರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ ತಿಳಿಸಿದರು.ಗ್ರಾಪಂ ಸದಸ್ಯರಾದ ಪರಶುರಾಮ ಕೋಳಿಸಾಲು, ತನ್ವೀರ್ ಅಹಮದ್, ಕೆ.ಬಿ.ನಾಗರಾಜ್ ಕೈಸೋಡಿ, ಕಾನಲೆ ಗ್ರಾಪಂ ಸದಸ್ಯೆ ಜಾನಕಿ ರಾಮಕೃಷ್ಣ, ಕಾರ್ಯಕರ್ತ ರಾಮಕೃಷ್ಣ ಪಡವಗೋಡು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಉಳವಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದ ಪರಶುರಾಮ್ ಕೋಳಿಸಾಲು ಬದಲು ಗಣಪತಿ ಮೈಸಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದರು.