ಉಜ್ಜಿನಿಯಲ್ಲಿ ಜೋಕುಮಾರನಿಗೆ ಪೂಜೆ

1 UJJANI 01
ಉಜ್ಜಿನಿಯ ಸದ್ಧರ್ಮ ಪೀಠದಲ್ಲಿ ಜೋಕುಮಾರನಿಗೆ ಪೂಜೆ ಸಲ್ಲಿಸಲಾಯಿತು.
Published on

ಉಜ್ಜಿನಿ: ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಸೋಮವಾರ ಜೋಕುಮಾರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಜೋಕುಮಾರನ ಮನೆ ಮನೆ ಭೇಟಿ ನೀಡುವ ಕಾರ್ಯ ಆರಂಭವಾಯಿತು.

ಭಾದ್ರಪದ ಮಾಸದ ಏಳು ದಿನ ಜೋಕುಮಾರಸ್ವಾಮಿ ಸಂಪ್ರದಾಯ ಆಚರಿಸಲಾಗುತ್ತದೆ. ಗಂಗಾಮತಸ್ಥ ಸಮುದಾಯದ ಜನರು ಏಳು ದಿನ ಜೋಕುಮಾರನನ್ನು ಬುಟ್ಟಿಯಲ್ಲಿ ಕೂಡಿಸಿಕೊಂಡು ‘ಅಡ್ಡಡ್ಡ ಮಳೆ ಬಂದ, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ’ ಎಂದು ಹಾಡುತ್ತಾ ಜೋಕುಮಾರರನ್ನು ಆರಾಧಿಸುತ್ತ ಮನೆ ಮನೆಗೆ ತೆರಳುತ್ತಾರೆ.

ಭಾದ್ರಪದ ಮಾಸದ ಅಷ್ಟಮಿಯಂದು ಜೋಕುಮಾರ ಹುಟ್ಟುತ್ತಾನೆ. ಮಣ್ಣಿನಿಂದ ತಯಾರಿಸಲಾದ ಜೋಕುಮಾರ ಮೂರ್ತಿಗೆ ಬೇವಿನ ಎಸಳುಗಳ ಉಡುಗೆಯೊಂದಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಅಲಂಕೃತ ಮೂರ್ತಿಯನ್ನು ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಆತನಿಗೆ ಸಂಬಂಧಿಸಿದ ಕತೆ-ಹಾಡುಗಳನ್ನು ಹಾಡುತ್ತಾ ಸಂಚರಿಸುತ್ತಾರೆ.

ಮನೆಮನೆಗೆ ತೆರಳಿದಾಗ ಭಕ್ತರು ದಕ್ಷಿಣೆ, ದವಸ-ಧಾನ್ಯ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ಜೋಕುಮಾರನ ಅರ್ಚಕರು ಕರಿಮಸಿ, ಬೇವಿನ ಎಲೆಗಳನ್ನು ಕೊಡುತ್ತಾರೆ. ಇದನ್ನು ಮಾರನೇ ದಿನ ಬೆಳಗಿನಜಾವ ಮಜ್ಜಿಗೆಯಲ್ಲಿ ಬೆರೆಸಿಕೊಂಡು ಹೊಲದಲ್ಲಿ ಹೋಗಿ ಚರಗ ಚೆಲ್ಲುತ್ತಾರೆ. ಹೀಗೆ ಮಾಡುವುದರಿಂದ ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಭಕ್ತಿಯಿಂದ ಜೋಕುಮಾರನ್ನು ಊರಲ್ಲಿ ಮನೆ ಮನೆಗೆ ತೆಗೆದುಕೊಂಡು ಹೋಗಿ, ಜನರು ನೀಡಿದ್ದನ್ನು ಪಡೆಯುತ್ತೇವೆ ಎಂದು ಜೋಕುಮಾರನನ್ನು ಹೊತ್ತು ತಂದಿದ್ದ ರತ್ನಮ್ಮ, ಭೀಮಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net