ಎರಡು ವರ್ಷದಲ್ಲಿ ರೈಲ್ವೆ ಕಾಮಗಾರಿ ಪೂರ್ಣ

sindhnoor-raichur railway
ಸಿಂಧನೂರಿನಲ್ಲಿ ಗುರುವಾರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಿಂಧನೂರು-ರಾಯಚೂರು ಹೊಸ ರೈಲು ಮಾರ್ಗದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕರಾದ ಹಂಪನಗೌಡ ಬಾದರ್ಲಿ, ಶಿವರಾಜ ಪಾಟೀಲ್ ಇದ್ದರು.
Published on

ಸಿಂಧನೂರು: ಸಿಂಧನೂರು-ರಾಯಚೂರುವರೆಗಿನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲಾಗುವುದು. 2026ರ ಡಿಸೆಂಬರ್‌ಗೆ ಹಿರೇಕೊಟ್ನೆಕಲ್ ಹಾಗೂ 2027ರ ಮಾರ್ಚ್‌ನಲ್ಲಿ ರಾಯಚೂರುವರೆಗೆ ರೈಲು ಓಡಿಸಲಾಗುವುದು ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ನಗರದಲ್ಲಿ ಗುರುವಾರ ಸಂಜೆ ಸಿಂಧನೂರು-ರಾಯಚೂರು (81 ಕಿಮೀ) ಹೊಸ ರೈಲು ಮಾರ್ಗ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮುನಿರಾಬಾದ್-ಮೆಹಬೂಬ್‌ನಗರ ರೈಲು ಸಂಪರ್ಕ ಯೋಜನೆಗೆ ಮುನ್ನುಡಿ ಬರೆದಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಅವರನ್ನು ಸ್ಮರಿಸಬೇಕು. ನಾವೆಲ್ಲ ದೇವೇಗೌಡರ ಗರಡಿಯಲ್ಲಿ ಪಳಗಿದ್ದರಿಂದ ಇಂದು ರಾಜ್ಯದಲ್ಲಿ ಮಹತ್ವದ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿದೆ. ಈ ಯೋಜನೆಗೆ ಬಸವರಾಜ ರಾಯರಡ್ಡಿ ಅವರ ಕೊಡುಗೆಯೂ ಇದೆ.

ಎರಡು ವರ್ಷದಲ್ಲಿ ಸಿಂಧನೂರು-ರಾಯಚೂರು ರೈಲು ಮಾರ್ಗ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಈ ಯೋಜನೆ ವ್ಯಾಪ್ತಿಯಲ್ಲಿ 17 ನಿಲ್ದಾಣಗಳು ಬರಲಿವೆ. ಜನರ ಬೇಡಿಕೆಯಂತೆ ಪೋತ್ನಾಳಕ್ಕೂ ರೈಲ್ವೆ ಸ್ಟೇಷನ್ ಮಂಜೂರು ಮಾಡಲಾಗಿದೆ. ಗೊರೇಬಾಳದಲ್ಲಿಯೂ ರೈಲು ನಿಲ್ದಾಣ ಉದ್ಘಾಟಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಆಲಮಟ್ಟಿ-ಯಾದಗಿರಿ 161 ಕಿಮೀ ಹೊಸ ರೈಲು ಮಾರ್ಗ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಗದಗ-ಎಲುಗಿ ಹೊಸ ಲೈನ್‌ಗೂ 150 ಕೋಟಿ ರೂ. ನೀಡಿದ್ದೇವೆ. 2025ರ ಆಗಸ್ಟ್ ವೇಳೆಗೆ ಕಲಬುರಗಿ-ಯಾದಗಿರಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಓಡಿಸಲಾಗುವುದು. ರಾಜ್ಯ ಸರ್ಕಾರದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ಹಂಪನಗೌಡ ಬಾದರ್ಲಿ, ಸಚಿವ ಶಿವರಾಜ ತಂಗಡಿ ಅವರ ರೈಲ್ವೆ ಲೈನ್ ಬೇಡಿಕೆಯನ್ನು ಮನ್ನಿಸಿ, ಆದಷ್ಟು ಶೀಘ್ರ ಕಾರ್ಯಗತಗೊಳಿಸುವೆ ಎಂದು ಭರವಸೆ ನೀಡಿದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಈ ಭಾಗದಲ್ಲಿ ಮಹತ್ವದ ರೈಲ್ವೆ ಯೋಜನೆ ಜಾರಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಅದರಂತೆ ಬಳ್ಳಾರಿ-ಸಿಂಧನೂರು-ಲಿಂಗಸುಗೂರು ರೈಲ್ವೆ ಯೋಜನೆ ಜಾರಿಗೊಳಿಸಿದರೆ ಹೆಚ್ಚಿನ ಸಹಾಯವಾಗಲಿದೆ. ಸಿಂಧನೂರು-ವಿಜಯವಾಡಕ್ಕೆ ರೈಲು ಓಡಿಸುವುದು, ರಸಗೊಬ್ಬರ ತಂದುಕೊಳ್ಳಲು ರೈಲ್ವೆ ಲೈನ್, ಸಿಂಧನೂರು-ಬೆಂಗಳೂರು ಹೊಸ ಲೈನ್ ಆರಂಭಿಸಬೇಕೆಂದು ಕೋರಿದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಸಚಿವ ಸೋಮಣ್ಣ ಅವರು ರೈಲ್ವೆ ಮಂತ್ರಿಯಾದ ನಂತರ ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಕಳೆ ಬಂದಿದೆ. ನಮ್ಮ ಭಾಗದಲ್ಲಿಯೂ ರೈಲ್ವೆ ಯೋಜನೆಗೆ ಇನ್ನಷ್ಟು ಬಲ ನೀಡಬೇಕೆಂದರು. ರಾಯಚೂರು ಶಾಸಕ ಶಿವರಾಜ ಪಾಟೀಲ್, ರೈಲ್ವೆ ಇಲಾಖೆಯ ಡಿಆರ್ ಮೀನಾ, ಅಧಿಕಾರಿ ಅಜಯ ಶರ್ಮಾ ಇತರರಿದ್ದರು.

ಎಚ್‌ಡಿಡಿ ಕೊಂಡಾಡಿದ ರಾಯರಡ್ಡಿ

ಮಾಜಿ ಪ್ರಧಾನಿ ದೇವೇಗೌಡರನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕೊಂಡಾಡಿದರು. ಮುನಿರಾಬಾದ್-ಮೆಹಬೂಬ್‌ನಗರ ಯೋಜನೆ ಆರಂಭದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಸಾಥ್ ನೀಡಿ, ಯೋಜನೆಯ ಸರ್ವೇಗೆ 1996ರಲ್ಲಿ ಚಾಲನೆ ನೀಡಿದರು. ಇದರಿಂದ ಈ ಭಾಗದಲ್ಲಿ ಸಿಂಧನೂರಿನವರೆಗೆ ರೈಲು ಓಡುವಂತಾಗಿದೆ. ಮುಂದೊಂದು ದಿನ ರಾಯಚೂರು ಸೇರಿ ಇತರ ರೈಲ್ವೆ ಲೈನ್‌ಗೆ ಸಂಪರ್ಕ ಪಡೆಯಬಹುದು ಎಂದರು.

ಸರ್ಕಾರ ಶೇ.50 ಅನುದಾನ ನೀಡಲಿ

ರಾಜ್ಯದ ರೈಲ್ವೆ ಯೋಜನೆಗಳಿಗೆ 800 ಕೋಟಿ ರೂ. ಬರಬೇಕಿದ್ದು, ಸಿಎಂಗೆ ಪತ್ರ ಬರೆಯುವೆ ಎಂದ ಸಚಿವ ಸೋಮಣ್ಣ, ಶೇ.50 ಅನುದಾನ ನೀಡುವಲ್ಲಿ ವಿಳಂಬ ಮಾಡುತ್ತಿರುವುದನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೆಸರನ್ನು ಒತ್ತಿ ಒತ್ತಿ ಹೇಳಿ, ರಾಜ್ಯ ಸರ್ಕಾರಕ್ಕೆ ತಿವಿದರು. ಪದೇಪದೆ ರಾಯರಡ್ಡಿ, ಶಿವರಾಜ ತಂಗಡಿ ಹೆಸರನ್ನು ಪ್ರಸ್ತಾಪ ಮಾಡುತ್ತಲೇ ಕೇಂದ್ರ ಸರ್ಕಾರ ರೈಲ್ವೆ ಯೋಜನೆಗಳಿಗೆ ನೀಡಿದ ಆದ್ಯತೆ, ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳ ಅನುಷ್ಠಾನದ ಮಹತ್ವವನ್ನು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net