

ಖಾನಾಪುರ: ರಾಮನಗರ-ಖಾನಾಪುರ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವ ಬಗ್ಗೆ ಯೋಜನಾ ನಿರ್ದೇಶಕ ಭುವನೇಶ ಕುಮಾರ ಅಸಮಾಧಾನ ವ್ಯಕ್ತಪಡಿಸಿ ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ರಸ್ತೆಯನ್ನು ಬಳಕೆಗೆ ಮುಕ್ತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಖಾನಾಪುರದಿಂದ ರಾಮನಗರ ಹಾಗೂ ಅನಮೋಡವರೆಗಿನ ರಸ್ತೆ ಕಾಮಗಾರಿಯನ್ನು ಗುರುವಾರ ಪರಿಶೀಲನೆ ನಡೆಸಿ ಶೀಘ್ರ ಕ್ರಮಕ್ಕೆ ಸೂಚನೆ ನೀಡಿದರು. ಎರಡು ದಿನಗಳ ಹಿಂದೆ ಶಾಸಕ ವಿಠ್ಠಲ ಹಲಗೇಕರ ಅವರು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ ಗಡ್ಕರಿ ಅವರನ್ನು ಗೋವಾದಲ್ಲಿ ಭೇಟಿಯಾಗಿ ಕಾಮಗಾರಿ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರ ತಂಡ ಭೇಟಿ ನೀಡಿದೆ. ಉಪಗುತ್ತಿಗೆದಾರ ಯಶಸ್ವಿ ಇನ್ಘ್ರಾ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮೋಹನ ರಾವ, ಉಪ ವ್ಯವಸ್ಥಾಪಕ ಸಂಗಮೇಶ ಕೋಲ್ಕಾರ್, ತಂತ್ರಜ್ಞ ದೀಪಂಕರ ಸರ್ಕಾರ ಉಪಸ್ಥಿತರಿದ್ದರು.
ತಿನಿಘಾಟ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತಿರುವುದರಿಂದ 70 ದಿನಗಳ ಕಾಲ ರಾಮನಗರ-ಆನಮೋಡ ರಸ್ತೆ ಸಂಚಾರ ಬಂದ್ ಆಗಲಿದೆ. ಈ ಬಗ್ಗೆ ಕಾರವಾರ ಜಿಲ್ಲಾಧಿಕಾರಿಯಿಂದ ಅನುಮತಿ ಕೋರಲಾಗಿದೆ. ಜನವರಿ ಎರಡನೇ ವಾರದಿಂದ ಮುಂದಿನ 70 ದಿನಗಳ ಕಾಲ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ.