

ಬೆಳಗಾವಿ: ಹಲವು ದಶಕಗಳಿಂದ ಈ ಭಾಗದ ಜನರ, ರೈತರ ಕನಸಾಗಿಯೇ ಉಳಿದಿದ್ದ ಸತ್ತಿಗೇರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿದ್ದು, ನಿಗದಿತ ಸಮಯದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಯರಗಟ್ಟಿ ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಈಚೆಗೆ ಸತ್ತಿಗೇರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಭಾಗದ ಮಳೆಯಾಶ್ರಿತ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಸತ್ತಿಗೇರಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದೆ. ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಟಪ್ರಭಾ ನದಿಯಿಂದ ಮಳೆಗಾಲದಲ್ಲಿ ಮುಂಗಾರು ಬೆಳೆಗಾಗಿ 1 ಟಿಎಂಸಿ ನೀರು ಉಪಯೋಗಿಸಿಕೊಂಡು ಯರಗಟ್ಟಿ, ತಾಲೂಕಿನ 11 ಗ್ರಾಮಗಳ ಅಂದಾಜು 6878.00 ಹೆಕ್ಟರ್ ಜಮೀನು ನೀರಾವರಿಗೆ ಒಳಪಡಲಿದೆ. ಮುಂಬರುವ ದಿನಗಳಲ್ಲಿ ಯರಗಟ್ಟಿ ತಾಲೂಕಿನ ಎಲ್ಲ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸತ್ತಿಗೇರಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಎರಡು ದಶಕಗಳಿಂದ ಹೋರಾಟ ನಡೆದುಕೊಂಡು ಬರುತ್ತಿವೆ. ಆದರೆ, ಅನುಷ್ಠಾನಕ್ಕೆ ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು ಎಂದರು.
ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುರಾಜೇಂದ್ರ ಸ್ವಾಮೀಜಿ, ಸತ್ತಿಗೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊರಕೊಪ್ಪದ ರೇವಣ್ಣ ಸಿದ್ದೇಶ್ವರ ಶರಣರು, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ, ನೀರಾವರಿ ಅಧೀಕ್ಷಕ ಅಭಿಯಂತ ಮಹಾವೀರ ಗಣಿ, ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತ ರುರಾಮ ಎಸ್., ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವರ, ರವೀಂದ್ರ ಯಲಿಗಾರ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಪೂಜೇರ, ಉಮೇಶ ಬಾಳಿ, ಬಂಗಾರೆಪ್ಪ ಹರಳಿ, ಪ್ರಕಾಶ ವಾಲಿ ಇತರರಿದ್ದರು.
ಶ್ರೀದಲ್ಲಿ ಯರಗಟ್ಟಿ ತಾಲೂಕಿಗೆ ಬೇಕಾಗುವ ಎಲ್ಲ ಕಚೇರಿಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುವುದು ಮತ್ತು ಸತ್ತಿಗೇರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಯರಗಟ್ಟಿ ಭಾಗವನ್ನು ಮಾದರಿ ಪ್ರದೇಶವನ್ನಾಗಿಸಲು ಎಲ್ಲ ಇಲಾಖೆಗಳ ಕಚೇರಿಗಳನ್ನು ಆರಂಭಿಸುವ ಕಾರ್ಯ ಪ್ರಗತಿ ಹಂತದಲ್ಲಿದೆ. | ವಿಶ್ವಾಸ ವೈದ್ಯ, ಶಾಸಕ