ಹೊಸ ವರ್ಷಾಚರಣೆಗೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಿಷೇಧ

MG-road-300x209
Published on

ಬೆಂಗಳೂರು: ರಾಜಧಾನಿಯಲ್ಲಿ ಸೀಮಿತ ವ್ಯಾಪ್ತಿಯಲ್ಲಿ ಸರಳವಾಗಿ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ನಿರ್ಬಂಧ ವಿಧಿಸಿದ್ದು, ನಗರದ ಎಲ್ಲೆಡೆ ಡಿ.31ರ ಸಂಜೆ 6ರಿಂದ ಜ.1ರ ಬೆಳಗ್ಗೆ 6ರ ವರೆಗೆ 144 ಸೆಕ್ಷನ್‌ನಡಿ ನಿಷೇಧಾಜ್ಞೆ ವಿಧಿಸಿದೆ. ಸೋಮವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ರಸ್ತೆ, ಪಾರ್ಕ್ ಮತ್ತು ಹೊರಾಂಗಣ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ರಸ್ತೆ, ಪಾರ್ಕ್, ಮೈದಾನಗಳಲ್ಲಿ ಗುಂಪು ಸೇರಿ ವರ್ಷಾಚರಣೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಖಾಸಗಿ ಸ್ಥಳಗಳಾದ ಕ್ಲಬ್, ಜನವಸತಿ ಅಪಾರ್ಟ್‌ಮೆಂಟ್, ರೆಸ್ಟೋರೆಂಟ್, ಮಾಲ್, ಪಬ್, ಹೋಟೆಲ್‌ಗಳಲ್ಲಿ ಶೇ.50 ಗ್ರಾಹಕರಿಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ಆದರೆ, ವಿಶೇಷ ಕಾರ್ಯಕ್ರಮಗಳಾದ ಸಂಗೀತ, ಬ್ಯಾಂಡ್, ನೃತ್ಯ, ಡ್ಯಾನ್ಸ್ ಮತ್ತು ಡಿಜೆಗಳನ್ನು ಆಯೋಜನೆ ಮಾಡುವಂತಿಲ್ಲ. ಸಾಮಾನ್ಯ ದಿನದಂತೆ ಆಯೋಜನೆ ಮಾಡಬೇಕು. ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಸಂಗೀತ ಬಳಸಬಹುದಾಗಿದೆ.

ಹೋಟೆಲ್, ಪಬ್, ಕ್ಲಬ್, ಮಾಲ್, ರೆಸಾರ್ಟ್‌ಗಳಲ್ಲಿ ಮುಗಂಡ ಬುಕ್ಕಿಂಗ್ ನೀಡಿದವರಿಗೆ ಮಾತ್ರ ಅವಕಾಶ. ಗ್ರಾಹಕರಿಗೆ ಕಡ್ಡಾಯವಾಗಿ ಪಾಸ್ ಅಥವಾ ಕೋಪನ್ ನೀಡಬೇಕು. ಕೆಲವು ಪ್ರದೇಶಗಳಲ್ಲಿ ಬುಕ್ಕಿಂಗ್ ಪಾಸ್, ಕೂಪನ್ ಇದ್ದರೇ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಬಗ್ಗೆ ಅನುಮತಿ, ನಿಯಮಗಳ ಬಗ್ಗೆ ತಿಳಿದುಕೊಳ್ಳಲು ಆಯಾ ಉಪ ಪೊಲೀಸ್ ಆಯುಕ್ತ(ಡಿಸಿಪಿ) , ಬಿಬಿಎಂಪಿ ಅಧಿಕಾರಿ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳನ್ನು ಸಂಪರ್ಕ ಮಾಡಬೇಕಾಗಿದೆ. ಹೋಟೆಲ್, ಪಬ್, ಕ್ಲಬ್, ರೆಸ್ಟೋರೆಂಟ್ ಇನ್ನಿತ್ತರ ಕಡೆಗಳಲ್ಲಿ ವರ್ಷಾಚರಣೆ ವೇಳೆ ತಮ್ಮ ಆವರಣ ಬಿಟ್ಟು ಗ್ರಾಹಕರು ಹೊರ ಬಂದರೆ ಅಂತಹ ಆಯೋಜಕರ ವಿರುದ್ಧವೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಮೀತ ಪ್ರದೇಶದಲ್ಲಿಯೇ ಕಾರ್ಯಕ್ರಮ ಆಯೋಜನೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ.

ಕೂಪನ್ ಇದ್ದರ ಸಂಚಾರ: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲದಲ್ಲಿ ಕಟ್ಟುನಿಟ್ಟಾಗಿ ಕಾನೂನು ಜಾರಿಗೆ ತರಲಾಗುತ್ತದೆ. ಇಲ್ಲಿನ ಪಬ್, ಹೋಟೆಲ್, ಕ್ಲಬ್, ರೆಸಾರ್ಟ್, ಮಾಲ್‌ಗಳು ತಮ್ಮ ಗ್ರಾಹಕರಿಂದ ಮುಗಂಡ ಬುಕ್ಕಿಂಗ್ ಮಾಡಿಸಿಕೊಂಡು ಪಾಸ್, ಕೂಪನ್ ವಿತರಣೆ ಮಾಡಬೇಕು. ಅಂತಹ ವ್ಯಕ್ತಿಗಳಿಗೆ ಮಾತ್ರ ಈ ಸ್ಥಳದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅನಗತ್ಯ ಓಡಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಕಮಲ್ ಪಂತ್ ಸ್ಪಷ್ಟಪಡಿಸಿದ್ದಾರೆ.

ಕೋವಿಡ್-19 ಮಾರ್ಗಸೂಚಿ ಕಡ್ಡಾಯ: ಕೋವಿಡ್-19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಬ್, ಕ್ಲಬ್, ಹೋಟೆಲ್, ರೆಸ್ಟೋರೆಂಟ್, ಮಾಲ್, ರೆಸಾರ್ಟ್‌ಗಳಲ್ಲಿ ಪಾಲನೆ ಮಾಡಬೇಕು. ಸ್ಯಾನಿಟೇಸರ್, ವೈಯಕ್ತಿಕ ಅಂತರ, ಮಾಸ್ಕ್, ದೇಹದ ಉಷ್ಣಾಂಶ ತಪಾಸಣೆ ಕಡ್ಡಾಯವಾಗಿ ಪಾಲನೆ ಮಾಡಬೇಕು. ತಪ್ಪಿದರೆ ಐಪಿಸಿ ಸೆಕ್ಷನ್, ರಾಷ್ಟ್ರೀಯ ವಿಪತ್ತು ನಿರ್ವಹಣ ಕಾಯ್ದೆಯಡಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಡ್ಡಾದಿಡ್ಡಿ ಸಂಚಾರಕ್ಕೆ ಬ್ರೇಕ್: ನಗರದಲ್ಲಿ ಅನಗತ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾರು, ದ್ವಿಚಕ್ರ ವಾಹನಗಳಲ್ಲಿ ಜಾಲಿ ರೇಡ್, ಡ್ರಾೃಗ್ ರೇಸ್, ಅಡ್ಡಾದಿಡ್ಡಿ ಚಲಾಯಿಸುವುದು ನಿಷೇಧಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಮೇಲ್ಸೆತುವೆಗಳನ್ನು ಮುಚ್ಚಲಾಗುತ್ತದೆ. ನಗರದ ಎಲ್ಲೆಡೆ ಬಿಗಿ ಭದ್ರತೆ ಒದಗಿಸಲಾಗುತ್ತದೆ. ನಾಕಬಂದಿ ಮಾಡಿ ವಾಹನ ತಪಾಸಣೆ ನಡೆಸಲಾಗುತ್ತದೆ. ಎಂದಿನಂತೆ ಡ್ರಂಕ್ ಆ್ಯಪ್ ಡ್ರೈವ್ ತಪಾಸಣೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಮಾಡುವರ ವಾಹನ ಜಪ್ತಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.

ವಿದೇಶದಲ್ಲಿ ಕರೊನಾ ಸೋಂಕು ಹೊಸ ರೂಪಾಂತರ ಪಡೆದಿದ್ದು, ಕಠಿಣ ನಿಬಂಧನೆಗಳ ನಡುವೆ ಹೊಸ ವರ್ಷಾಚರಣೆಗೆ ಅನುಮತಿ ನೀಡಲಾಗಿದೆ. ಕಡ್ಡಾಯವಾಗಿ ಪಾಲನೆ ಮಾಡಬೇಕು.

| ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net