ವರ್ಷದಲ್ಲಿ 6.79 ಕೋಟಿ ರೂ. ಸಂಗ್ರಹ ನಿಯಮ ಉಲ್ಲಂಸಿದವರ ವಿರುದ್ಧ ದಂಡ ಪ್ರಯೋಗ

Traffic Fine
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಬೆಂಗಳೂರು - ಮೈಸೂರು ಹೆದ್ದಾರಿ ನಿರ್ಮಾಣದ ನಂತರ ಅಪಘಾತ ವಲಯ ಎಂದು ತಟ್ಟಿದ ಅಪವಾದ, ಸಾಕಷ್ಟು ಕ್ರಮಗಳ ಹೊರತಾಗಿಯೂ ನಿಯಂತ್ರಣಕ್ಕೆ ಬಂದಿಲ್ಲ. ಇಂತಹ ಆರೋಪಗಳ ನಡುವೆ ಸದ್ದುಗದ್ದಲವಿಲ್ಲದೆ ಸಂಚಾರ ಬಿಗಿ ನಿಯಮಗಳ ಜಾರಿ ಕಾರ್ಯಕ್ಕೆ ಇಳಿದ ಜಿಲ್ಲಾ ಪೊಲೀಸ್ ಈ ಕಳಂಕದಿಂದ ಬಹುತೇಕ ಹೊರ ಬಂದಿದೆ.

ಆದರೆ, ಇದಕ್ಕಾಗಿ ಅನುಸರಿಸಿದ ಮಾರ್ಗದಿಂದ ಕಳೆದ ಒಂದು ವರ್ಷದಲ್ಲಿ ಸುಮಾರು 102692 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡುವ ಮೂಲಕ ವಾಹನ ಸವಾರರಿಂದ ಬರೋಬ್ಬರಿ 6.79 ಕೋಟಿ ರೂ. ದಂಡ ಸಂಗ್ರಹ ಮಾಡಿದೆ.

ಕಳಂಕ ಅಂಟಿತ್ತು

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಉದ್ಘಾಟನೆಗೊಂಡ ನಂತರ ಇದು ಸಾವಿನ ಹೆದ್ದಾರಿ ಎನ್ನುವ ಕಳಂಕ ಹೊತ್ತಿತ್ತು. ಕಾರಣ ಅತಿವೇಗದ ಚಾಲನೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಹಲವಾರು ಬಾರಿ ಹೆದ್ದಾರಿಗೆ ಭೇಟಿ ನೀಡಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದರು. ಒಂದೆಡೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತಾಂತ್ರಿಕ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ಮಗ್ನವಾದರೆ, ಹೆದ್ದಾರಿಯಲ್ಲಿ ವಾಹನ ಸವಾರರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಸ್‌ಪಿ ಕಾರ್ತಿಕ್ ರೆಡ್ಡಿ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಇದರ ಪರಿಣಾಮ ಅಪಘಾತಗಳ ಸಂಖ್ಯೆ ಕಡಿಮೆ ಆಗಿದೆ.

ಡ್ರಿಂಕ್ ಆ್ಯಂಡ್ ಡ್ರೈವ್‌ಗೆ ತಡೆ

ಜಿಲ್ಲೆಯಲ್ಲಿ ಈ ಮೊದಲು ಕುಡಿದು ವಾಹನ ಚಾಲನೆ ಮಾಡುವವರ ಪತ್ತೆಗೆ ಅಷ್ಟೇನೂ ಗಮನ ಹರಿಸಿರಲಿಲ್ಲ. 2021ರಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 29 ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಇದು 60ಕ್ಕೆ ಏರಿಕೆ ಆಗಿತ್ತು. 2023ರ ಇದರ ಸಂಖ್ಯೆ ಬಹುತೇಕ 20 ಪಟ್ಟು ಹೆಚ್ಚಾಗಿ 1260 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲು ಮಾಡಿ, ನಿಯಮ ಉಲ್ಲಂಘಿಸಿದ ಚಾಲಕರಿಂದ ಒಟ್ಟು 1,23,22,500 ರೂ. ದಂಡ ವಸೂಲಿ ಮಾಡಲಾಗಿತ್ತು. ಪ್ರಮುಖವಾಗಿ ಹೊಸ ಹೆದ್ದಾರಿಯಲ್ಲಿಯೇ ಅತಿ ಹೆಚ್ಚು ದಂಡ ವಿಧಿಸಲಾಗಿದೆ ಎನ್ನುವುದು ವಿಶೇಷ. ನಿಯಮ ಉಲ್ಲಂಘಿಸಿದ ವಾಹನ ಸವಾರರ ಪರವಾನಗಿ ರದ್ದುಪಡಿಸುವ ಸಂಬಂಧ ಆಯಾ ಆರ್‌ಟಿಒಗಳಿಗೆ ಪತ್ರ ಬರೆಯಲಾಗಿದೆ.

ಐಎಂವಿ ಕೇಸ್‌ಗಳು ಹೆಚ್ಚು

ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಸಂಖ್ಯೆಗಳಿಗೇನು ಕಡಿಮೆ ಆಗಿಲ್ಲ. ಇದು ಕೇವಲ ಹೆದ್ದಾರಿ ಮಾತ್ರವಲ್ಲದೆ, ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಹೆಲ್ಮೆಟ್ ರಹಿತ ಪ್ರಯಾಣ, ಸೀಟ್ ಬೆಲ್ಟ್ ಹಾಕದೇ ಇರುವುದು, ಟ್ರಿಬಲ್ ರೈಡಿಂಗ್, ವಾಹನ ವಿಮೆ ಇಲ್ಲದಿರುವುದು, ನಂಬರ ಪ್ಲೇಟ್ ಇಲ್ಲದಿರುವುದು ಸೇರಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 2,71,478 ಪ್ರಕರಣಗಳನ್ನು ದಾಖಲು ಮಾಡಿ, ಒಟ್ಟು 11.15 ಕೋಟಿ ರೂ. ದಂಡವನ್ನು ಪೊಲೀಸರು ವಸೂಲಿ ಮಾಡಿದ್ದಾರೆ.

ಕ್ರಮ ಮುಂದುವರಿಯಲಿ

ಪೊಲೀಸ್ ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಪಾಲನೆ ವಿಚಾರವನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಂಚಾರ ನಿಯಮ ಉಲ್ಲಂಸುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇದರಿಂದ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಪ್ರಾಣಹಾನಿಯನ್ನು ತಪ್ಪಿಸಬಹುದಾಗಿದೆ.

209ರಲ್ಲೂ ಇದೇ ಕ್ರಮವಿರಲಿ

ಎನ್.ಎಚ್ 275ರಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಈಗ ನಿರ್ಮಾಣ ಹಂತದಲ್ಲಿರುವ ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲೂ ಕಾರ್ಯರೂಪಕ್ಕೆ ತರಬೇಕಿದೆ. ಈಗಾಗಲೇ ಇಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದು, ಹೆದ್ದಾರಿ ಪೂರ್ಣಗೊಂಡ ನಂತರ ಇದಕ್ಕೂ ಸಾವಿನ ಹೆದ್ದಾರಿ ಎನ್ನುವ ಕಳಂಕ ತಟ್ಟುವುದು ಖಂಡಿತ. ಈ ಹಿನ್ನೆಲೆಯಲ್ಲಿ ಈಗಲೇ ಜಿಲ್ಲಾ ಪೊಲೀಸರು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಐಎಂವಿ ಪ್ರಕರಣಗಳುವರ್ಷ   ಪ್ರಕರಣ        ದಂಡ ವಸೂಲಿ (ರೂ.ಗಳಲ್ಲಿ)2021 56,382      2,20,69,3002022 1,13,664   3,38,44,3002023 1,01,432   5,56,29,600--ಡ್ರಿಂಕ್ ಆ್ಯಂಡ್ ಡ್ರೈವ್ವರ್ಷ   ಪ್ರಕರಣ   ದಂಡ ವಸೂಲಿ (ರೂ.ಗಳಲ್ಲಿ)2021 29       2.63 ಲಕ್ಷ2022 60       6.00 ಲಕ್ಷ2023 1260    1.23 ಕೋಟಿ

==

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net