ಬಾವಿಯಲ್ಲಿ ಸ್ಫೋಟಕ ಹೂತಿಟ್ಟಿದ್ದ ಇಬ್ಬರು ವಶಕ್ಕೆ

27 BGV ckd 5-Web
ಹತ್ತರವಾಟ ಗ್ರಾಮದ ಬಳಿ ಸ್ಫೋಟಕ ಹೂತಿಟ್ಟಿದ್ದ ಬಾವಿಯನ್ನು ಪಿಎಸ್‌ಐ ರಾಕೇಶ ಬಗಲಿ ಹಾಗೂ ಸಿಬ್ಬಂದಿ ಪರಿಶೀಲಿಸಿದರು.
Published on

ಚಿಕ್ಕೋಡಿ: ತಾಲೂಕಿನ ಹತ್ತರವಾಟ ಗ್ರಾಮದ ವ್ಯಾಪ್ತಿಯ ಹುಕ್ಕೇರಿ ತಾಲೂಕಿನ ನೀಡಸೋಸಿ ಗ್ರಾಮದ ಕಲ್ಲಪ್ಪ ನಿಂಗಪ್ಪ ಸೂಜಿ ಎಂಬುವರ ಬಾವಿಯಲ್ಲಿ ಜಿಲೆಟಿನ್ ಹಾಗೂ ಡಿಟೋನೇಟರ್ ಸ್ಫೋಟಕ ಹೂತಿಟ್ಟಿದ್ದ ಇಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಘಟಪ್ರಭಾದ ಶಾಂತಿಲಾಲ ಗಣೇಶಲಾಲ ದುಗ್ಗರ ಹಾಗೂ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ತ್ಯಾಗರಾಜ ಸೋಮು ರಾಥೋಡ ಬಂಧಿತರು. ಬಾವಿಯ 20 ಹೋಲ್‌ಗಳಲ್ಲಿ ಅಕ್ರಮವಾಗಿ ಜಿಲೆಟಿನ್ ಹಾಗೂ ಡಿಟೋನೇಟರ್ ಜೋಡಿಸಿ ಸ್ಫೋಟಿಸಲು ತಯಾರಿ ನಡೆಸಿದ್ದರು. ಸ್ಫೋಟಕಗಳನ್ನು ಸುರಕ್ಷಿತವಾಗಿ ಹೊರತೆಗೆಯುವುದು ಅಪಾಯಕಾರಿ ಎಂದು ತಜ್ಞರು ತಿಳಿಸಿದ್ದರಿಂದ, ಬಾವಿಯಲ್ಲಿಯೇ ಸ್ಫೋಟಿಸಲಾಯಿತು. ಮಗ್ಗರ, 90 ಮೀಟರ್ ಪ್ಲಾಸ್ಟಿಕ್ ವೈರ್, ಸಣ್ಣ ವೈರ್ ತುಂಡುಗಳನ್ನು ವಶಪಡಿಸಿಕೊಳ್ಳಲಾಯಿತು. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲೆಟಿನ್ ವಶ, ನಾಲ್ವರು ಅಂದರ್

ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಭೀಮಪ್ಪ ಬಸಪ್ಪ ಹೆಗಡೆ ಎಂಬುವರ ಜಮೀನಿನಲ್ಲಿ ಜಿಲೆಟಿನ್ ಕಡ್ಡಿ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಗೋಡ ಠಾಣೆ ಪೊಲೀಸರು ಶನಿವಾರ ನಾಲ್ವರನ್ನು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಗೋಲಬಾವಿ ಗ್ರಾಮದ ಗೋಪಾಲ ಬಸಪ್ರಭು ಸೊರಗಾಂವಿ, ಗಿರಿಮಲ್ಲಪ್ಪ ಬಸಪ್ಪ ಸಿದ್ದಾಪುರ, ಬಬಲೇಶ್ವರದ ರಾಜೇಶ ಮೋನಪ್ಪ ಬಡಿಗೇರ ಹಾಗೂ ಜಮೀನು ಮಾಲೀಕ ಭೀಮಪ್ಪ ಬಸಪ್ಪ ಹೆಗಡೆ ಮೇಲೆ ಪ್ರಕರಣ ದಾಖಲಾಗಿದೆ. 158 ಜಿಲಿಟೆನ್ ಕಡ್ಡಿ, 51 ಇಡಿ ಕೇಬಲ್ ,3 ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ, ಒಂದು ಟ್ರಾೃಕ್ಟರ್ ಜಪ್ತಿ ಮಾಡಲಾಗಿದೆ. ರಾಜೇಶ ಬಡಿಗೇರ ಎಂಬಾತ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net