ವಕ್ಫ್ ಆಸ್ತಿ ವಿವಾದ ಹಿನ್ನೆಲೆ, ಬಿಜೆಪಿ ಪರಿಶೀಲನಾ ಸಮಿತಿಯಿಂದ ಅಂತರ ಕಾಯ್ದುಕೊಂಡ ಶಾಸಕ ಯತ್ನಾಳ-ಸಂಸದ ಜಿಗಜಿಣಗಿ

basangouda patil yatnal05
Published on

ವಿಜಯಪುರ: ವಕ್ಫ್ ಆಸ್ತಿ ವಿವಾದ ಹಾಗೂ ರೈತ ಸಮುದಾಯ ಆತಂಕಗೊಂಡ ಹಿನ್ನೆಲೆ ಬಿಜೆಪಿಯಿಂದ ರಚಿಸಲಾದ ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ಶಾಸಕರು ಹಾಗೂ ಮುಖಂಡರನ್ನೊಳಗೊಂಡ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿ ಅಹವಾಲು ಆಲಿಸಿತು. ಈ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಗೈರು ಎದ್ದು ಕಾಣುತ್ತಿತ್ತು.

ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದ್ದ ಮತ್ತು ಆರಂಭದಲ್ಲಿ ಬಿಜೆಪಿ ರಚಿಸಿದ ಅಹವಾಲು ಆಲಿಕೆ ತಂಡದಿಂದ ದೂರವುಳಿದು ಬಳಿಕ ಮರು ಸೇರ್ಪಡೆಯಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರು ಗೋವಿಂದ ಕಾರಜೋಳ ನೇತೃತ್ವದ ಸಮಿತಿಯಿಂದ ಅಂತರ ಕಾಯ್ದುಕೊಂಡಿದ್ದು ಚರ್ಚೆಗೆ ಕಾರಣವಾಯಿತು.

ಆರಂಭದಲ್ಲಿ ಸಮಿತಿಯಿಂದ ಶಾಸಕ ಯತ್ನಾಳ ಹಾಗೂ ಸಂಸದ ಜಿಗಜಿಣಗಿ ಅವರನ್ನು ಕೈ ಬಿಡಲಾಗಿತ್ತಾದರೂ ಆ ಬಳಿಕ ಯತ್ನಾಳ ಅವರು ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದಿದ್ದರು. ಕೊನೆಗೆ ಯತ್ನಾಳ ಮತ್ತು ಜಿಗಜಿಣಗಿ ಹೆಸರು ಸೇರ್ಪಡೆ ಮಾಡಿ ಮತ್ತೊಂದು ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆದರೂ, ಮಂಗಳವಾರ ಯತ್ನಾಳ ಹಾಗೂ ಜಿಗಜಿಣಗಿ ಅವರು ಗೈರಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಂಸದ ಗೋವಿಂದ ಕಾರಜೋಳರು, ವಕ್ಫ್ ಬಗ್ಗೆ ಶಾಸಕ ಯತ್ನಾಳ ಅವರು ಹೋರಾಟ ಆರಂಭಿಸಿದ್ದು, ಅವರ ಧ್ವನಿಗೆ ಬೆಂಬಲವಾಗಿ ನಾವು ಕಾರ್ಯ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net