ಅಯೋಧ್ಯೆ ಅಭಿವೃದ್ಧಿ ಮರೆತ ಸರ್ಕಾರ

SRIRAMA
ಗಂಗಾವತಿ ತಾಲೂಕಿನ ಅಯೋಧ್ಯೆ ಗ್ರಾಮದಲ್ಲಿರುವ ಶ್ರೀರಾಮ, ಲಕ್ಷ್ಮಣ, ಸುಗ್ರೀವಾ ಮತ್ತು ಆಂಜನೇಯ ಮೂರ್ತಿ.
Published on

ಗಂಗಾವತಿ: ಶ್ರೀರಾಮ ಜನ್ಮಸ್ಥಳ ಉತ್ತರ ಭಾರತದ ಅಯೋಧ್ಯೆ ಜಾಗತಿಕ ಮಟ್ಟದಲ್ಲಿ ಪ್ರಚಲಿತದಲ್ಲಿರುವಾಗ, ದಕ್ಷಿಣ ಭಾರತದ ಗಂಗಾವತಿ ತಾಲೂಕಿನ ಅಯೋಧ್ಯೆ ಗ್ರಾಮದಲ್ಲಿ ಶ್ರೀರಾಮನ ಕುರುಹುಗಳಿದ್ದು, ಇತಿಹಾಸಕಾರರ ಗಮನಸೆಳೆಯುತ್ತಿದೆ. ಅಲ್ಲಿನ ಜನ್ಮಸ್ಥಳ ಅಯೋಧ್ಯೆ ಸರಯೂ ದಡದಲ್ಲಿದ್ದರೆ, ಇಲ್ಲಿನ ಅಯೋಧ್ಯಾ ತುಂಗಭದ್ರಾ ನದಿ ದಡದಲ್ಲಿದ್ದು, ಇದರ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕೆಂಬುದು ಜನರ ಒತ್ತಾಸೆಯಾಗಿದೆ.

ಅಯೋಧ್ಯೆಯಷ್ಟೇ ಪ್ರಾಮುಖ್ಯತೆ ಪಡೆದ ತಾಲೂಕಿನ ಅಂಜನಾದ್ರಿ ಬೆಟ್ಟ, ಹನುಮನ ಜನ್ಮಸ್ಥಳವೆಂದು ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿ ಉಲ್ಲೇಖವಿದ್ದು, ಶ್ರೀರಾಮ, ಲಕ್ಷ್ಮಣ, ಸೀತೆ, ವಾಲಿ, ಸುಗ್ರೀವಾ ಸೇರಿ ವಾನರ ಸೇನೆಯ ಹಲವು ಐತಿಹ್ಯ ಸ್ಮಾರಕಗಳು ಕಾಣಬಹುದಾಗಿದೆ. ಅದರಂತೆ ಅಯೋಧ್ಯೆ ಗ್ರಾಮ ಅಂಜನಾದ್ರಿ ಬೆಟ್ಟದಿಂದ 20 ಕಿ.ಮೀ. ದೂರದಲ್ಲಿದ್ದರೆ, ಗಂಗಾವತಿ ಕೇಂದ್ರ ಸ್ಥಾನದಿಂದ ಕೇವಲ 9 ಕಿ.ಮೀ. ಅಂತರದಲ್ಲಿದೆ.

ಇಲ್ಲಿನ ಶ್ರೀರಾಮ, ಲಕ್ಷ್ಮಣ, ಸುಗ್ರೀವಾ ಮತ್ತು ಹನುಮನ ಮೂರ್ತಿಗಳು ರಾಮಾಯಣದ ಕತೆ ಹೇಳುತ್ತಿವೆ. ಅತಿ ಹೆಚ್ಚು ದೇವಾಲಯ ಹೊಂದಿದ ವಿಶೇಷ ಗ್ರಾಮ, ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆ ಸಾಕಾರಗೊಂಡಿದ್ದರೂ, ಅಭಿವೃದ್ಧಿ ಅಷ್ಟಕಷ್ಟೆ. ಐತಿಹಾಸಿಕ ಕ್ಷಣಕ್ಕೆ ಎದುರು ನೋಡುತ್ತಿರುವ ಅಯೋಧ್ಯೆ ಶ್ರೀರಾಮಮಂದಿರದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ, ಶ್ರೀರಾಮ ಜನ್ಮಭೂಮಿ ಹೆಸರನ್ನಿಟ್ಟುಕೊಂಡ ತಾಲೂಕಿನ ಅಯೋಧ್ಯಾಯತ್ತ ಸರ್ಕಾರ ಕಣ್ಣು ಹಾಯಿಸುವುದೇ ಎನ್ನುವ ಕಾತುರ ಗ್ರಾಮಸ್ಥರಲ್ಲಿದೆ.

ಐತಿಹ್ಯ ಉಲ್ಲೇಖ: ಸೀತೆ ಅರಸಿ ಬಂದ ಶ್ರೀರಾಮ ಮತ್ತು ಲಕ್ಷ್ಮಣ, ಅಯೋಧ್ಯೆಯಿಂದ ಕಿಷ್ಕಿಂಧಾ ಕ್ಷೇತ್ರಕ್ಕೆ ಬರುವಾಗ ಅಯೋಧ್ಯಾ ಗ್ರಾಮದ ತುಂಗಭದ್ರಾ ನದಿ ದಾಟಿರುವ ಉಲ್ಲೇಖ ಇತಿಹಾಸಕಾರರು ಹೇಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಗ್ರಾಮದಲ್ಲಿ ಶ್ರೀರಾಮ ಮತ್ತು ಲಕ್ಷ್ಮಣ ಒಂದು ವಿಗ್ರಹವಿದ್ದರೆ, ಶ್ರೀರಾಮ ಮತ್ತು ಸುಗ್ರೀವಾ ಭೇಟಿಯಾದ ಇನ್ನೊಂದು ವಿಗ್ರಹವಿದೆ. ಪಕ್ಕದಲ್ಲಿ ಆಂಜನೇಯ ಮೂರ್ತಿಯಿದೆ. ಪುರಾಣ ಕಾಲದಿಂದಲೂ ಗ್ರಾಮವಿದ್ದ ಬಗ್ಗೆ ಕುರುಹಗಳಿದ್ದರೂ, ಗ್ರಾಮದಲ್ಲಿ ದೊರೆತ ವೀರಗಲ್ಲು, ಮಾಸ್ತಿಗಲ್ಲು ಇತರ ಶಿಲ್ಪಗಳು 11ನೇ ಶತಮಾನದ ಕತೆ ಹೇಳುತ್ತಿವೆ. ಕೆಲ ಮೂರ್ತಿ, ದೇವಾಲಯಗಳು ನಿಧಿಯಾಸೆಗೆ ಭಗ್ನಗೊಂಡಿದ್ದು, ನದಿ ಪಾಲಾಗಿವೆ. 3 ಸಾವಿರ ಜನಸಂಖ್ಯೆಯಿದ್ದರೂ, ಎಲ್ಲ ಸಮುದಾಯದವರ ವಾಸ ಸ್ಥಾನವಾಗಿದೆ. ಕೃಷಿ ಮತ್ತು ಮೀನುಗಾರಿಕೆ ಪ್ರಮುಖ ಕಾಯಕವಾಗಿದೆ.

ಪ್ರಗತಿ ಶೂನ್ಯ: 11ನೇ ಶತಮಾನದಿಂದ 21ನೇ ಶತಮಾನದವರೆಗೂ ಒಂದೇ ಅಯೋಧ್ಯೆ ಇದ್ದು, 1992ರಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಹಳೇ ಅಯೋಧ್ಯೆ, ಹೊಸ ಅಯೋಧ್ಯೆ ಮತ್ತು ಕೃಷ್ಣ ದೇವರಾಯ ನಗರ ಎಂದು ಮೂರು ಭಾಗವಾಗಿದೆ. ಪ್ರವಾಹ ಪೀಡಿತಕ್ಕೆ ಒಳಗಾದ ಗ್ರಾಮಸ್ಥರ ಪುನರ್‌ವಸತಿಗಾಗಿ ಹೊಸ ಅಯೋಧ್ಯೆ ನಿರ್ಮಾಣವಾದರೂ, ಕೆಲವರೂ ಇನ್ನೂ ಹಳೇ ಊರದಲ್ಲಿ ಉಳಿದುಕೊಂಡಿದ್ದಾರೆ. ತುಂಗಭದ್ರಾ ನದಿ ತಟದಲ್ಲಿದ್ದರೂ ಕುಡಿವ ನೀರಿನ ಸಮಸ್ಯೆಯಿದ್ದು, ರಸ್ತೆ ಹದಗೆಟ್ಟಿದೆ. ಮೀನು ಸಾಕಣೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಸರ್ಕಾರದ ಯೋಜನೆ ಸಮರ್ಪಕ ಬಳಸಿಕೊಂಡಿದ್ದಾರೆ. ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯಲ್ಲಿದ್ದರೂ, ಪಂಚಾಯತ್ ರಾಜ್ ಇಲಾಖೆ ಯೋಜನೆ ಸದ್ಭಳಕೆಯಾಗಿಲ್ಲ. ವಿತರಣೆ ಕಾಲುವೆ ಮತ್ತು ಏತ ನೀರಾವರಿಯಿಂದ ಕೃಷಿ ಭೂಮಿಗೆ ನೀರು ದೊರೆತರೂ, ಸಮರ್ಪಕ ಸಿಕ್ಕಿಲ್ಲ.

30ಕ್ಕೂ ಅಧಿಕ ರಾಮಾಲಯ

ಉತ್ತರ ಭಾರತದ ನಂತರ ದಕ್ಷಿಣ ಭಾರತದಲ್ಲಿ ಅಯೋಧ್ಯೆ ಒಂದೇ ಗ್ರಾಮವಿದ್ದು, ಅದು ಗಂಗಾವತಿ ತಾಲೂಕಿನಲ್ಲಿದೆ. ಕೊಪ್ಪಳ ತಾಲೂಕಿನ ಅಗಳಕೇರಾ ಭಾಗದಲ್ಲಿ ಈ ಹಿಂದೆ ಇದ್ದ ಅಯೋಧ್ಯೆಯಲ್ಲಿ ಪ್ರಸ್ತುತ ಯಾವುದೇ ಕುರುಹುಗಳಿಲ್ಲ. ಗ್ರಾಮದಲ್ಲಿ ಶ್ರೀರಾಮಾಲಯ, ಆಂಜನೇಯ, ಯಲ್ಲಮ್ಮ, ದ್ಯಾವಮ್ಮ, ದುರ್ಗಾದೇವಿ, ಸಾಯಿಬಾಬ, ಶ್ರೀ ಚನ್ನಮಲ್ಲಿಕಾರ್ಜುನ, ಗಂಗಾದೇವಿ ದೇವಾಲಯಗಳಿವೆ. ಆಂಧ್ರ ವಲಸಿಗರು ಹೆಚ್ಚಿರುವ ಪ್ರದೇಶದಲ್ಲಿ ಕೃಷಿಗೆ ಪ್ರಾಧಾನ್ಯತೆ. ಶ್ರೀರಾಮ ನಡೆದಾಡಿದ ಕುರುಹುಗಳ ಹಿನ್ನೆಲೆಯಲ್ಲಿ ತಾಲೂಕಿನ ಅಯೋಧ್ಯೆಯಿಂದ ಕಿಷ್ಕಿಂಧಾ ಕ್ಷೇತ್ರದವರೆಗೂ 30ಕ್ಕೂ ಹೆಚ್ಚು ರಾಮಾಲಯಗಳಿದ್ದು, ದುಪ್ಪಟ್ಟು ಆಂಜನೇಯ ದೇವಾಲಯಗಳಿವೆ. ಶ್ರೀರಾಮನಗರ, ರಾಂಪುರದಲ್ಲೂ ದೇಗುಲಗಳಿದ್ದು, ಶ್ರೀರಾಮ ಮತ್ತು ಆಂಜನೇಯ ಹೆಸರು ಉಲ್ಲೇಖಿಸುವ ಸಾವಿರಾರರು ಜನರಿದ್ದಾರೆ.

ಹಲವು ವರ್ಷಗಳಿಂದ ಅಯೋಧ್ಯೆ ಗ್ರಾಮವಿದ್ದು, ತುಂಗಭದ್ರಾ ನದಿ ಹರಿವು ಹೆಚ್ಚಾಗಿದ್ದರಿಂದ ಹೊಸ ಅಯೋಧ್ಯೆ, ಕೃಷ್ಣದೇವರಾಯ ನಗರ (ಕೆಡಿ ನಗರ) ಅಸ್ತಿತ್ವಕ್ಕೆ ಬಂದಿವೆ. ಗ್ರಾಮ ಇನ್ನೂ ಆಭಿವೃದ್ಧಿಯಾಗಬೇಕಿದೆ. ವಿರುಪಣ್ಣ, ಹಳೆ ಅಯೋಧ್ಯೆ ಗ್ರಾಮಸ್ಥ ಪುರಾಣಕಾಲದಿಂದಲೂ ತಾಲೂಕಿನಲ್ಲಿ ಅಯೋಧ್ಯೆ ಗ್ರಾಮವಿದ್ದು, ಶ್ರೀರಾಮ, ಲಕ್ಷ್ಮಣ, ಸುಗ್ರೀವಾ ಮೂರ್ತಿಗಳನ್ನು ಕಾಣಬಹುದಾಗಿದೆ. 11ನೇ ಶತಮಾನದಲ್ಲಿನ ಕೆಲ ಕುರುಹಗಳನ್ನು ಕಾಣಬಹುದಾಗಿದ್ದು, ಜಿಲ್ಲೆಯಲ್ಲಿ ಒಂದೇ ಅಯೋಧ್ಯೆ ಅಸ್ತಿತ್ವದಲ್ಲಿದೆ.ಡಾ.ಶರಣಬಸಪ್ಪ ಕೋಲ್ಕಾರ್ಇತಿಹಾಸ ಸಂಶೋಧಕ, ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net