

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಮೂರು ಜನರ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದ ಕರಿಕೋತಿಯನ್ನು ಶುಕ್ರವಾರ ಸೆರೆ ಹಿಡಿದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಎರಡು ದಿನಗಳಲ್ಲಿ ಇಬ್ಬರನ್ನು ತೀವ್ರವಾಗಿ ಕಚ್ಚಿಗಾಯಗೊಳಿಸಿದ್ದರಿಂದ ಮೆಟ್ರಿ ಗ್ರಾಮದ ವಿಶ್ವಾರಾಧ್ಯ ಗುರುಕುಲ ಮಠದ ಆವರಣದಲ್ಲಿ ಗುರುವಾರ ಸಂಜೆ ಬೋನು ಇರಿಸಲಾಗಿತ್ತು. ಅಂದೇ ಬೈಕ್ ಸವಾರನ ಮೇಲೆ ದಾಳಿ ಗಾಯಗೊಳಿಸಿತ್ತು. ಹೀಗಾಗಿ ಅರವಳಿಕೆ ಚುಚ್ಚುಮದ್ದು ನೀಡಿ ಕೋತಿ ಸೆರೆ ಹಿಡಿಯಲು ಯೋಜಿಸಲಾಗಿತ್ತು.
ಶುಕ್ರವಾರ ಗ್ರಾಮದ ಮಹಾಂಕಾಳಮ್ಮ ಗುಡಿ ಹತ್ತಿರ ಮರದ ಮೇಲಿದ್ದ ಕೋತಿಗೆ, ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್‌ನ ಸಹಾಯಕ ಪಶು ವೈದ್ಯಾಧಿಕಾರಿ ಮಹೇಂದ್ರ ಅರವಳಿಕೆ ಚುಚ್ಚುಮದ್ದು ಎಸೆದು, ಪ್ರಜ್ಞೆ ತಪ್ಪಿಸಿ ಸೆರೆ ಹಿಡಿದಿದ್ದಾರೆ.
ಸೆರೆ ಸಿಕ್ಕ ಕೋತಿ ಗಂಡಾಗಿದ್ದು ಜಿಯೋಲಾಜಿಕಲ್ ಪಾರ್ಕ್‌ಗೆ ಒಯ್ದು ಆರೋಗ್ಯ ಪರೀಕ್ಷಿಸಿ ಅದನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕುರಿತು ತೀರ್ಮಾನಿಸಲಾಗುವುದು ಎಂದು ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯಪಾಲಕ ಬಿ.ರಾಘವೇಂದ್ರ ತಿಳಿಸಿದರು. ಅರಣ್ಯ ವೀಕ್ಷಕ ನಾಗರಾಜ ಮತ್ತು ಸಿಬ್ಬಂದಿ ಇದ್ದರು.