

ಮುಂಡರಗಿ: ಪ್ರತಿಯೊಬ್ಬರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ವಚನಗಳಲ್ಲಿ ಸಮಾನತೆ, ಕಾಯಕ, ದಾಸೋಹ ತತ್ವವಿದೆ. ಸಾಮಾಜಿಕ ಅನಿಷ್ಠಗಳನ್ನು ದೂರ ಮಾಡಲು ಬೇಕಾಗಿರುವ ಸಂದೇಶಗಳಿವೆ. ವಚನಗಳಲ್ಲಿ ಬದುಕು ರೂಪಿಸಿಕೊಳ್ಳುವುದಕ್ಕೆ ಮಾರ್ಗದರ್ಶಿಯಾಗಿರುವ ಸೂತ್ರಗಳಿವೆ. ಬದುಕಿಗೆ ಬೆಳಕನ್ನು ತೋರಿಸುವ ಶಕ್ತಿ ಇದೆ ಎಂದು ಡಂಬಳ- ಗದಗನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ವಿಶ್ವಧರ್ಮ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಚನಗಳ ಸಾರವೇ ಪ್ರವಚನ. ವಚನಗಳು ಎಂದರೆ ಬಹಳ ಪವಿತ್ರ, ಶ್ರೇಷ್ಠ, ಮೌಲ್ಯಯುತವಾಗಿರುವಂತದ್ದು. ವಿಶ್ವಮಾನ್ಯ ಮೌಲ್ಯಗಳಿರುವುದರಿಂದ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಮೆರುಗು ನೀಡಿದೆ. ಕನ್ನಡ ಸಾಹಿತ್ಯದ ಸ್ಥಾನ- ಮಾನ ಹೆಚ್ಚಿಸಿದೆ. ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಲ್ಲಿ ಸಹಾಯಕವಾಗಿದೆ ಎಂದರು.
ನುಡಿದಂತೆ ನಡೆ ಇರಬೇಕೆಂದು ಶರಣರು ಹೇಳುತ್ತಾರೆ. ನಡೆ ನುಡಿ ಪರಿಶುದ್ಧ್ದೊಳಿಸುವ ನಿಟ್ಟಿನಲ್ಲಿ ಪ್ರವಚನ ನಡೆಸಿಕೊಟ್ಟಿದ್ದಾರೆ. ಶರಣರ ಕಾಯಕ, ದಾಸೋಹ ತತ್ವವನ್ನು ಜಗತ್ತಿನ ಎಲ್ಲ ದೇಶಗಳು ಆಚರಣೆಯಲ್ಲಿ ತಂದುಕೊಂಡರೆ ಜಗತ್ತಿನಲ್ಲಿ ಬಡತನವಿರುವುದಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಮಾತನಾಡಿ, ಧರ್ಮದಲ್ಲಿ ಶ್ರದ್ಧೆ ಬಹಳ ಮುಖ್ಯ. ಶ್ರದ್ಧೆ ಇಟ್ಟುಕೊಂಡು ಬಾಳಬೇಕು. ಜೀವನಕ್ಕೆ ಶ್ರದ್ಧೆ ಮುಖ್ಯ. ಬಸವಧರ್ಮ ಬೆಳೆಯಬೇಕೆಂದರೆ ಶ್ರಮಿಕ ವರ್ಗದವರನ್ನು ಪ್ರೀತಿಸಬೇಕು ಎಂದರು.
ಪ್ರವಚನ ಸಮಿತಿ ಅಧ್ಯಕ್ಷ ಪವನ ಚೋಪ್ರಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರವಚನ ಸಮಿತಿ, ದಾನಿಗಳು, ಸೇವಕರಿಗೆ ಸನ್ಮಾನಿಸಲಾಯಿತು. ಮಕ್ಕಳಿಂದ ವಚನ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಗಮೇಶ ಪಾಟೀಲ ಹಾಗೂ ಬಸವರಾಜ ಹೊನ್ನಿಗನೂರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮಾಜಿ ಸಚಿವ ಎಸ್.ಎಸ್. ಪಾಟೀಲ, ಶ್ರೀ ಗೋಣಿರುದ್ರ ದೇವರು, ಎಚ್. ವಿರೂಪಾಕ್ಷಗೌಡ್ರ, ದೇವು ಹಡಪದ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ವೀರೇಂದ್ರ ಅಂಗಡಿ, ಶಂಕ್ರಣ್ಣ ಅಂಗಡಿ, ಪಾಲಾಕ್ಷಿ ಗಣದಿನ್ನಿ, ಬಸಯ್ಯ ಗಿಂಡಿಮಠ, ದೇವಪ್ಪ ರಾಮೇನಹಳ್ಳಿ, ಇತರರು ಇದ್ದರು. ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಓಂಪ್ರಕಾಶ ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿದರು.