

ಕೊಳವಿ: ಗೋಕಾಕ ತಾಲೂಕಿನ ಮಮದಾಪುರ ಗ್ರಾಮದ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆದಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮಡ್ಡೆಪ್ಪ ಯಲ್ಲಪ್ಪ ಬಾನಸಿ (42) ಕೊಲೆಗೀಡಾದ ವ್ಯಕ್ತಿ. ಅದೇ ಗ್ರಾಮದ ಬೀರಪ್ಪ ಸುಣಧೋಳಿ (67) ಆರೋಪಿ. ಇವರಿಬ್ಬರ ಮಧ್ಯೆ ಜಮೀನಿನ ಸೀಮೆ ವಿಚಾರವಾಗಿ ಕಲಹ ನಡೆದಿತ್ತು. ಕೊಲೆಗೀಡಾದ ಮಡ್ಡೆಪ್ಪ ಬೀರಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ವೇಳೆ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಮಂಗಳವಾರ ಬೆಳಗ್ಗೆ ದೇವರ ಕಟ್ಟೆ ಮೇಲೆ ಮಲಗಿದ್ದ. ಸಮಯ ಸಾಧಿಸಿದ ಆರೋಪಿ ಬೀರಪ್ಪ ಕಬ್ಬು ಕಟಾವು ಮಾಡುವ ಕೊಯ್ತದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಎದ್ದು ಓಡಿದರೂ ಅಟ್ಟಾಡಿಸಿ ಕೊಚ್ಚಿದ್ದಾನೆ. ಸ್ಥಳೀಯರು ಆರೋಪಿಯನ್ನು ಹಿಡಿದು ಹಗ್ಗದಿಂದ ಕಂಬಕ್ಕೆ ಕಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರ ಗಾಯಗೊಂಡಿದ್ದ ಮಡ್ಡೆಪ್ಪನನ್ನು ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಗೋಪಾಲ ರಾಥೋಡ್, ಪಿಎಸ್‌ಐ ಕಿರಣ್ ಮೋಹಿತೆ, ಡಿಎಸ್ಪಿ ಡಿ.ಎಚ್.ಮುಲ್ಲಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.