ಶಿಲಾಮಂಟಪದಲ್ಲಿ ಕುರಿ ಚರ್ಮ ಸುಲಿತ

21 GVT 07
ಗಂಗಾವತಿ ತಾಲೂಕು ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ವಿಜಯನಗರದ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಶಿಲಾಮಂಟಪದಲ್ಲಿ ಕುರಿಯೊಂದರ ಚರ್ಮ ಸುಲಿಯುತ್ತಿರುವುದು.
Published on

ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ವಿಜಯನಗರದ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಶಿಲಾಮಂಟಪದಲ್ಲಿ ಕುರಿಯೊಂದರ ಚರ್ಮ ಸುಲಿಯುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಆನೆಗೊಂದಿ ತುಂಗಭದ್ರ ನದಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಶಿಲಾ ಮಂಟಪವಿದ್ದು, 64 ಕಂಬಗಳನ್ನು ಹೊಂದಿವೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಶಿಲಾ ಮಂಟಪ ಗೋಚರಿಸಲಿದ್ದು, ದನ, ಕುರಿಗಾಹಿ ಮತ್ತು ಮೀನುಗಾರರಿಗೆ ವಿಶ್ರಾಂತಿ ಸ್ಥಳವಾಗಿದೆ.

ಇದೇ ಶಿಲಾ ಮಂಟಪದಲ್ಲಿ ಯುವಕನೊಬ್ಬ ಕುರಿಯ ಮಾಂಸವನ್ನು ಸುಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಐತಿಹಾಸಿಕ ಸ್ಥಳಕ್ಕೆ ಅಪಮಾನ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದರ ಜತೆಗೆ ಪಾವಿತ್ರ್ಯತೆಯನ್ನು ಕಾಪಾಡುವಂತೆ ಒತ್ತಾಯಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಪಂ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಘಟನೆಗೆ ಕಾರಣವಾದ ವ್ಯಕ್ತಿಯ ಕುಟುಂಬದೊಂದಿಗೆ ಸಭೆ ನಡೆಸಿ, ಛೀ ಮಾರಿ ಹಾಕಿದ್ದಾರಲ್ಲದೇ, ಕ್ಷಮಾಪಣೆ ಪತ್ರ ಬರೆಯಿಸಿಕೊಂಡಿದ್ದಾರೆ. ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ಐತಿಹಾಸಿಕ ಸ್ಮಾರಕ ಅವಮಾನ ಮಾಡುತ್ತಿರುವ ಯುವಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಗ್ರಾಪಂಗೆ ಮನವಿಗೆ ಮಾಡಲಾಗುವುದು ಎಂದರು.

ಈ ಕುರಿತು ಗ್ರಾಪಂ ಪಿಡಿಒ ರವೀಂದ್ರ ಕುಲ್ಕರ್ಣಿ ಪ್ರತಿಕ್ರಿಯಿಸಿ, ಗ್ರಾಮದ ಯುವಕನೊಬ್ಬನ ಕೃತ್ಯವಾಗಿದ್ದು, ಈ ಬಗ್ಗೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net