

ಕುಕನೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತವಾಗಿದ್ದು, ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ತಾಲೂಕಿನ ಪುನರ್‌ವಸತಿ ಶಿರೂರು ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಕೆ.ಹೆಚ್.ಪಾಟೀಲ್ ಅವರ ಮೂರ್ತಿ ಅನಾವರಣಗೊಳಿಸಿ ಭಾನುವಾರ ಮಾತನಾಡಿದರು.
ಕೆ.ಹೆಚ್ ಪಾಟೀಲ್ ಅವರು ರಾಜ್ಯ ರಾಜಕಾರಣದಲ್ಲಿ ಜನ ಸಮುದಾಯದ ನೆನಪಿನಲ್ಲಿ ಉಳಿಯುವ ವ್ಯಕ್ತಿಯಾಗಿದ್ದಾರೆ. ಅವರು 12 ಬಾರಿ ಚುನಾವಣೆಗೆ ಸ್ಪರ್ಧಿಸಿ, 8 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಕೆಲಸ ನಿರ್ವಹಿಸಿದ್ದಾರೆ. ವಿಧಾನಸಭೆಗೆ ಹೊಸದಾಗಿ ಆಯ್ಕೆಗೊಂಡು ಬರುವ ಶಾಸಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ನಾನು ಮೊದಲ ಸಲ ಶಾಸಕನಾದಾಗ ಸಚಿವರಾಗಿದ್ದ ಕೆ.ಎಚ್ ಪಾಟೀಲ್ ಅವರು ಪ್ರೀತಿಯಿಂದ ಕಂಡು ಮಾತನಾಡಿಸುತ್ತಿದ್ದರು. ಅಲ್ಲದೇ ಅಭಿವೃದ್ಧಿ ಬಗ್ಗೆ ತಿಳಿಸುತ್ತಿದ್ದರು.
ಕೆ.ಎಚ್ ಪಾಟೀಲ್ ಅವರು ಹೋರಾಟ, ಸಂಘರ್ಷ ಹಾದಿಯವರಾಗಿದ್ದರು. ಕಷ್ಟದ ಪರವಾಗಿ ಜನರಿಗಾಗಿ ಹೋರಾಡಿದರು. ಸಹಕಾರಿ ಕ್ಷೇತ್ರ, ಸಾರ್ವಜನಿಕ ಬದುಕು, ರಾಜಕೀಯ ಹೋರಾಟ ಮಾಡಿದರು. ರಾಜಕೀಯ ಸಂಘರ್ಷದಿಂದ ಮುಖ್ಯಮಂತ್ರಿಯಾಗಲಿಲ್ಲ. ಅವರು ಸಿಎಂ ಆಗಿದ್ದರೆ ಕರ್ನಾಟಕ ಸಮಗ್ರ ಅಭಿವೃದ್ಧಿ ಚಿತ್ರಣ ಬದಲಾಗುತ್ತಿತ್ತು. ಅವರು ಸಹಕಾರಿ ಕ್ಷೇತ್ರ ಆಯ್ದುಕೊಂಡು ಜನಸಮುದಾಯದ ಕಷ್ಟ ದೂರ ಮಾಡಲು ಮುಂದಾದರು. ರಾಜಕಾರಣದಲ್ಲಿ ಅನೇಕ ಏಳು ಬೀಳು ಕಂಡರೂ ಅವರ ಹೋರಾಟದ ಹಾದಿ ಅವರನ್ನು ಸಿಎಂ ಆಗಲು ಬಿಡಲಿಲ್ಲ. ರಾಜ್ಯಕ್ಕೆ ಕರ್ನಾಟಕ ಹೆಸರು ಕೆ.ಎಚ್ ಪಾಟೀಲ್ ಪ್ರಥಮವಾಗಿ ಪ್ರಸ್ತಾವನೆ ಮಾಡಿದವರು. ರಾಜ್ಯಕ್ಕೆ ಅವರಿಂದ ಕರ್ನಾಟಕ ಎಂದು ಹೆಸರು ಬಂದಿದೆ ಎಂದರು.
ಯಲಬುರ್ಗಾ ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಕಾಲೇಜು ಮಾಡಲು ಬಸವರಾಜ ರಾಯರೆಡ್ಡಿ ಪ್ರಸ್ತಾವನೆ ಮಾಡಿದಾಗ ಹಳ್ಳಿಯಲ್ಲಿ ಕಟ್ಟಲು ಈತನಿಗೆ ಬುದ್ಧಿ ಇಲ್ಲವಾ ಎಂದಿದ್ದೇ ಆದರೆ ಸದ್ಯ ತಳಕಲ್ ಇಂಜಿನಿಯರಿಂಗ್ ಕಾಲೇಜು ಮಾದರಿಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ರಾಯರಡ್ಡಿ ಅವರ ಕೊಡುಗೆ ಅಪಾರವಿದೆ ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಕೆ.ಹೆಚ್.ಪಾಟೀಲ್ ಅವರೊಂದಿಗೆ ಕೆಲಸ ಮಾಡಿದ್ದು, ಅವರು ಪ್ರಮಾಣಿಕ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದವರು. ಪಕ್ಷದ ಏಳಿಗೆಗೆ ಶ್ರಮಿಸಿದ್ದಾರೆ. ಕೃಷಿ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ನಿರ್ವಹಿಸಿದ್ದು, ಸುವರ್ಣ ಅಕ್ಷರದಲ್ಲಿ ಬರೆಯಬೇಕು. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬಹಳ ಅನುಕೂಲವಾಗಿದೆ. ಬಡವರು, ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ ಎಂದರು.
ಕಾನೂನೂ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜ್ಯದ ಪ್ರಗತಿಯನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಸಹ ಒಪ್ಪುತ್ತಾರೆ. ರಾಜ್ಯದಲ್ಲಿ ಬಡತನವನ್ನು ಸಂಪೂರ್ಣ ನೀಗಿಸಲಿದ್ದು, ಬಡತನ ಶೇ.0 ಆಗಿದೆ. ವರ್ಷಕ್ಕೆ 58 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗೆ ಹಣ ನೀಡಲಾಗುತ್ತದೆ ಎಂದರು.
ಯಲಬುರ್ಗಾ ಕ್ಷೇತ್ರ ಸಣ್ಣ ಸಮೀಕ್ಷೆ ಮಾಡಿಸಿದರೆ ರಾಯರಡ್ಡಿ ಅವರ ಅಭಿವೃದ್ಧಿ ಕಾರ್ಯಗಳಲ್ಲಿ ನಂ.1 ಬರುತ್ತಾರೆ. ಶಿಕ್ಷಣ, ಆರೋಗ್ಯ ಹಾಗೂ ಇತರೆ ಅಭಿವೃದ್ಧಿಯಲ್ಲಿ ಯಲಬುರ್ಗಾ ಕ್ಷೇತ್ರ ಮುಂದಿದೆ ಎಂದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಕೆ.ಹೆಚ್.ಪಾಟೀಲ್ ಅವರ ಗರಡಿಯಲ್ಲಿ ನಾವು ಬೆಳೆದಿದ್ದು, ಕೆಲಸದ ವಿಷಯದಲ್ಲಿ ಸಾಕಷ್ಟು ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರ ಮೂರ್ತಿ ಅನಾವರಣ ಮಾಡುತ್ತಿರುವುದು ಸಂತೋಷವಾಗುತ್ತದೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸದ ಕೆ.ರಾಜಶೇಖರ ಹಿಟ್ನಾಳ್, ಕಾಡಾ ಅಧ್ಯಕ್ಷ ಹಸನಸಾಬ ನಬಿಸಾಬ ದೋಟಿಹಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಪುರ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ.ಶ್ರೀರಾಮ್ ಎಲ್.ಅರಸಿದ್ದಿ, ಎಸಿ ಮಹೇಶ ಮಾಲಗಿತ್ತಿ, ಸಿಂಗಟಾಲೂರ ಏತ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರ ಐ. ಪ್ರಕಾಶ, ಮುಖ್ಯ ಇಂಜಿನಿಯರ್ ಎಲ್.ಬಸವರಾಜ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರಚಾರ್ಯ ಜೋಶಿ, ಮಾಜಿ ಜಿಪಂ ಸದಸ್ಯ ಹನಮಂತಗೌಡ ಪಾಟೀಲ್, ಪ್ರಮುಖರಾದ ಸತ್ಯನಾರಾಯಣ ಹರಪನಹಳ್ಳಿ, ಅಶೋಕ ತೋಟದ, ಸಂಗಮೇಶ ಗುತ್ತಿ ಇತರರಿದ್ದರು.