

ಹುಕ್ಕೇರಿ: ಸಮಾಜಮುಖಿ ಕಾರ್ಯಗಳು ಜನಮನದಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತವೆ. ಜಿನೈಕ್ಯ ವಸಂತ ನಿಲಜಗಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಸಮೂಹ ಅದಕ್ಕೆ ನಿದರ್ಶನ ಎಂದು ಆವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಹೇಳಿದರು.
ಪಟ್ಟಣದ ಅರ್ಜುನವಾಡ ರಸ್ತೆಯಲ್ಲಿರುವ ಮಹಾವೀರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿನೈಕ್ಯ ವಸಂತ ನಿಲಜಗಿ ಅವರ 6ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ತಂದೆ ವಸಂತ ಅವರು ಸ್ಥಾಪಿಸಿದ ಸಂಘ ಸಂಸ್ಥೆಗಳು ಬಡ, ಮಧ್ಯಮ ಮತ್ತು ವ್ಯಾಪಾರಸ್ಥರ ಬದುಕಿಗೆ ದಾರಿಯಾಗಿದೆ. ಅವರ ತತ್ತ್ವ-ಸಿದ್ಧಾಂತಗಳ ಮಾರ್ಗದರ್ಶನದಿಂದ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದೆ ಎಂದರು.
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ಪತ್ರಕರ್ತ ಬಾಬು ಸುಂಕದ ಮತ್ತು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಜೀವ ಚೌಗಲಾ ಮಾತನಾಡಿದರು. ಜಿನೈಕ್ಯ ವಸಂತ ನಿಲಜಗಿ ಅವರ ಪುತ್ಥಳಿಗೆ ಪೂಜೆ ನೆರವೇರಿಸಲಾಯಿತು. ವಿಜಯಮಾಲಾ ನಿಲಜಗಿ, ಸಂಜಯ ನಿಲಜಗಿ, ಪ್ರಜ್ವಲ ನಿಲಜಗಿ, ಬಿ.ಬಿ.ಲಠ್ಠಿ, ವಿಕಾಸ ಖತಗಲ್ಲಿ, ಕಿರಣ ಸೊಲ್ಲಾಪುರೆ, ರಾಜೇಂದ್ರ ಪಾಟೀಲ, ಸಂತೋಷಸಿಂಗ್ ರಜಪೂತ, ಪ್ರವೀಣ ಪಾಟೀಲ ಇತರರು ಇದ್ದರು.