ದಕ್ಷಿಣದಲ್ಲಿ ಅಮಿತ ಷಾ ಭರ್ಜರಿ ರೋಡ್ ಶೋ

In the south Amita Shah Bharjari Road Sho Belgaum
ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪರ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾನುವಾರ ರೋಡ್ ಶೋ ನಡೆಸಿದರು. ಗೋವಾ ಸಿಎಂ ಪ್ರಮೋದ ಸಾವಂತ, ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪಾಲ್ಗೊಂಡಿದ್ದರು.
Published on

ಬೆಳಗಾವಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪರ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾನುವಾರ ಭರ್ಜರಿ ರೋಡ್ ಶೋ ನಡೆಸಿದರು.

ಕ್ಷೇತ್ರದ ವಡಗಾವಿಯ ಪಿಂಪಳ ಕಟ್ಟೆಯಿಂದ ಆರಂಭವಾದ ಅಮಿತ್ ಷಾ ರೋಡ್ ಶೋ ವಡಗಾವಿ ಮುಖ್ಯ ರಸ್ತೆ, ನಾಥ್ ಪೈ ವೃತ್ತ, ಶಹಾಪುರ, ಖಡೇಬಜಾರ್ ಮೂಲಕ ಕಪಿಲೇಶ್ವರ ಕಾಲನಿಯ ಶಿವ ಚಿರಿತ್ರೆ ತಲುಪಿತು. ಬಿಜೆಪಿಯ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ರೋಡ್ ಶೋ ಸಾಗುವ ಎರಡೂ ಬದಿಯಲ್ಲಿ ಜನರು ಜಮಾಯಿಸಿದ್ದರು.

ರೋಡ್ ಶೋ ಆರಂಭಕ್ಕೂ ಮುನ್ನ ಬೃಹತ್ ಬೈಕ್ ರ‌್ಯಾಲಿ ನಡೆಯಿತು. ಸಾವಿರಾರು ಕಾರ್ಯಕರ್ತರು ಬಿಜೆಪಿ ಶಾಲು ಧರಿಸಿ, ಬೈಕ್‌ಗಳಿಗೆ ಬಿಜೆಪಿ ಧ್ವಜ ಕಟ್ಟಿ ಜಯಘೋಷ ಮೊಳಗಿಸುತ್ತ ರ‌್ಯಾಲಿ ನಡೆಸಿದರು. ಸುಮಾರು 25 ಸಾವಿರ ಬೈಕ್ ಮೇಲೆ 50 ಸಾವಿರ ಕಾರ್ಯಕರ್ತರು 4 ಕಿ.ಮೀ. ವರೆಗೆ ರ‌್ಯಾಲಿ ನಡೆಸಿದರು.

ರೋಡ್ ಶೋ ಬಳಿಕ ಮಾತನಾಡಿದ ಅಮಿತ್ ಷಾ, ರ‌್ಯಾಲಿಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿರುವುದು ನೋಡಿದರೆ ಬಹಳ ಸಂತೋಷವಾಗುತ್ತದೆ. ಜನಸ್ತೋಮ ನೋಡಿದರೆ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸುತ್ತಾರೆ. ಕಳೆದ ಚುನಾವಣೆಗಿಂತ ಈ ಬಾರಿ ಅವರ ಲೀಡ್ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೋವಾ ಸಿಎಂ ಪ್ರಮೋದ ಸಾವಂತ, ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಇತರರು ಪಾಲ್ಗೊಂಡಿದ್ದರು.

ಸಾರ್ವಜನಿಕರ ಪರದಾಟ

ಅಮಿತ್ ಷಾ ರೋಡ್ ಶೋ ವೇಳೆ ಗಲ್ಲಿ ಗಲ್ಲಿಯಿಂದ ಜನರು ರಸ್ತೆಗೆ ಆಗಮಿಸಿದ್ದರು. ಈ ವೇಳೆ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಕೂಲಿಕಾರರು ಹಾಗೂ ವಿವಿಧ ಕೆಲಸ, ಕಾರ್ಯಗಳಿಗೆ ಹೋಗುವವರು ಗಂಟೆಗಟ್ಟಲೆ ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net