

ರಾಮದುರ್ಗ: ಮಲಪ್ರಭಾ ನದಿ ಪ್ರವಾಹದಿಂದ ನದಿ ಪಾತ್ರ ರೈತರ ಜಮೀನಿಗೆ ನೀರು ನುಗ್ಗಿ ಬೆಳೆಗಳು ಹಾನಿಗೊಳಗಾಗಿವೆ. ಕೆಲವು ಮನೆಗಳು ಬಿದ್ದಿದ್ದು ಅವುಗಳ ಸಮರ್ಪಕ ಮಾಹಿತಿ ತಯಾರಿಸಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸಗಬೇಕು. ಒಂದು ವೇಳೆ ಸಮೀಕ್ಷೆಗೆ ತೆರಳಿದ ಅಧಿಕಾರಿಗಳು ಲೋಪವೆಸಗಿದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಪ್ರವಾಹ ಸಮೀಕ್ಷೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಪ್ರವಾಹಕ್ಕೆ ತಾಲೂಕಿನ 28 ಗ್ರಾಮಗಳು, 9 ವಾರ್ಡ್‌ಗಳು ತುತ್ತಾಗಿದ್ದವು. ಅವುಗಳ ಸಮೀಕ್ಷೆಯಲ್ಲಿ ಲೋಪವಾಗಿ, ಸಮಸ್ಯೆ ಎದುರಿಸುವಂತಾಗಿದೆ. ಈ ಬಾರಿ 13 ಗ್ರಾಮಗಳು ಹಾಗೂ ನಾಲ್ಕು ವಾರ್ಡ್‌ಗಳಲ್ಲಿ ಪ್ರವಾಹದ ನೀರು ಹರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಕಳೆದ ವರ್ಷದ ತಪ್ಪು ಮರುಕಳಿಸಿದಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಂಡು ಪ್ರವಾಹ ಉಂಟಾದ ಹಾನಿ ಕುರಿತು ನೈಜ ಮಾಹಿತಿಯನ್ನು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಹಾಗೂ ರೈತರಿಗೆ ತೊಂದರೆಯಾಗದಂತೆ ಸರ್ಕಾರದ ಸೌಲಭ್ಯ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು. ಹೆಸ್ಕಾಂ ಇಲಾಖೆಯವರು ರೈತರ ಪಂಪ್‌ಸೆಟ್‌ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಗಿರೀಶ ಸ್ವಾಧಿ ಮಾತನಾಡಿ, ಶಾಸಕರ ನಿರ್ದೇಶನದಂತೆ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ಸರ್ಕಾರದ ನಿಯಮಾವಳಿಗಳ ಪ್ರಕಾರ ವಾಸ್ತವ ಸ್ಥಿತಿಯ ಕುರಿತು ಸಮೀಕ್ಷೆ ನಡೆಸಬೇಕು. ಕಳೆದ ವರ್ಷ ಮನೆಗಳ ಹಾನಿ ದಾಖಲಿಸುವಾಗ ಅಧಿಕೃತ ಮತ್ತು ಅನಧಿಕೃತ ಎಂದು ನಮೂದಿಸಲಾಗಿದ್ದು, ಇದರಿಂದ ಪರಿಹಾರ ಹಂಚಿಕೆಗೆ ತೊಂದರೆಯಾಗಿದೆ. ಯಾವುದೇ ಹಾನಿಗೊಳಗಾದ ಮನೆಗಳನ್ನು ಅನಧಿಕೃತ ಎಂದು ದಾಖಲಿಸದೆ ಗ್ರಾಮ ಪಂಚಾಯಿತಿ ಅಥವಾ ಆರ್‌ಟಿಸಿ ಉತಾರ ಪಡೆದು ಪರಿಹಾರ ನೀಡುವಂತಾಗಬೇಕು ಎಂದರು. ಮನೆಗಳ ಸಮೀಕ್ಷೆಯನ್ನು ನಾಲ್ಕು ದಿನ ಹಾಗೂ ಬೆಳೆಗಳ ಸಮೀಕ್ಷೆಯನ್ನು 10 ದಿನಗಳ ಒಳಗಾಗಿ ಮುಗಿಸಬೇಕು ಎಂದರು.
ಸಭೆಗೂ ಮುನ್ನ ಸೋಮವಾರ ನಿಧನರಾದ ಭಾರತ ರತ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ ತಂಗೋಳಿ ಇತರರಿದ್ದರು.