ಅರಮನೆ ಆವರಣದಲ್ಲಿ ಅ. 15ರಿಂದ 23ರ ವರೆಗೆ ದಸರಾ ಸಾಂಸ್ಕೃತಿಕ ಸಂಭ್ರಮ

7
Published on

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಅರಮನೆ ಅಂಗಳದಲ್ಲಿ ಆಯೋಜಿಸಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.15ರಿಂದ 23ರವರೆಗೆ ನಡೆಯಲಿವೆ.
ಅರಮನೆ ಆವರಣ ಸೇರಿದಂತೆ ವಿವಿಧ 9 ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಅರಮನೆಯಲ್ಲಿ ಅ.15ರಿಂದ 22ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದ್ದು, ಇತರ ವೇದಿಕೆಗಳಲ್ಲಿ ಅ.23ರವರೆಗೆ ನಡೆಯಲಿವೆ. ಈ ಬಾರಿ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ದಸರಾ ಮಹೋತ್ಸವ ಸಮಿತಿ ವಿಶೇಷಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅ.15ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಜತೆಗೆ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಳಿಕ ನಟಿ ಭಾವನಾ ಮತ್ತು ತಂಡದಿಂದ ‘ಶ್ರೀ ಚಾಮುಂಡೇಶ್ವರಿ ಮರ್ದಿನಿ ಸಿಂಹವಾಹಿನಿ’ ನೃತ್ಯರೂಪಕ ಪ್ರಸ್ತುತಪಡಿಸಲಾಗುವುದು. ಗಾಯಕಿ ಸುನೀತಾ, ವಿದ್ವಾನ್ ಅಜಯ್ ವಾರಿಯರ್ ಅವರಿಂದ ಸಂಗೀತಯಾನ ಇರಲಿದೆ. ಅ.16ರಂದು ವಿದ್ವಾನ್ ಡಾ.ದುಂಡಯ್ಯ ಪೂಜೇರ ತಂಡದಿಂದ ಶಾಸ್ತ್ರೀಯ ವಾದ್ಯಕಛೇರಿ ತಾಳ-ಮೇಳ-ಯಾನ ಇರಲಿದೆ. ಕಥಕ್ ಕಲಾವಿದರಾದ ಹರಿ ಮತ್ತು ಚೇತನ ಅವರಿಂದ ಕಥಕ್ ಸಂಭ್ರಮ, ಆಯನಾ ಡಾನ್ಸ್‌ನಿಂದ ಭಾರತೀಯ ನೃತ್ಯವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅ.17ರಂದು ಉಸ್ತಾದ್ ರಫೀಕ್‌ಖಾನ್-ವಿದ್ವಾನ್ ಅಂಕುಶ್ ಎನ್.ನಾಯಕ್ ಅವರಿಂದ ವಾದ್ಯಸಂಗೀತ-ಸಿತಾರ್ ಜುಗಲ್‌ಬಂದಿ, ಚಿಂತನ್ ವಿಕಾಸ್ ಅವರಿಂದ ಕನ್ನಡ ಸಂಗೀತ, ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ, ವಿದ್ವಾನ್ ರಾಕೇಶ್ ಚೌರಾಸಿಯಾ ಅವರಿಂದ ಕರ್ನಾಟಕ-ಹಿಂದುಸ್ತಾನಿ ಜುಗಲ್‌ಬಂದಿ, ಅಪರ್ಣ ವಿನೋದ್ ಮೆನನ್ ಮತ್ತು ತಂಡದಿಂದ ಭರತನಾಟ್ಯ ಪ್ರದರ್ಶನವಿದೆ ಎಂದರು.
ಅ.18ರಂದು ಕಿಕ್ಕೀರಿ ಕೃಷ್ಣಮೂರ್ತಿ ಮತ್ತು ಅಪ್ಪಗೆರೆ ತಿಮ್ಮರಾಜು ಹಾಗೂ ತಂಡದಿಂದ ಭಾವಗೀತೆ, ಜನಪದ ಗೀತೆಗಳ ಸಂಭ್ರಮ ಇರಲಿದೆ. ಬಳಿಕ ಪೊಲೀಸ್ ಬ್ಯಾಂಡ್, ಶುಭಾ ಮುದ್ಗಲ್ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.
ತ್ರಿವೇಣಿ ನೃತ್ಯ ಪ್ರದರ್ಶನ
ಅ.19ರಂದು ವಿದ್ಯಾ ರವಿಶಂಕರ್ ಮತ್ತು ತಂಡ ಶ್ರೀ ರಾಜೇಶ್ವರಿ ನೃತ್ಯ ರೂಪಕ ಪ್ರಸ್ತುತಪಡಿಸಿದರೆ, ವಿದ್ವಾನ್ ಮೈಸೂರು ಹರೀಶ್ ಪಾಂಡವ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ಫ್ಯೂಷನ್ ಇರಲಿದೆ. ವಿದ್ವಾನ್ ಟಿ.ಎಂ.ಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ, ಅ.20ರಂದು ಮುಡಿಗುಂಡ ಮೂರ್ತಿ ಮತ್ತು ತಂಡದಿಂದ ಕಾವ್ಯ-ಕುಂಚ-ಗಾಯನ ಇರಲಿದೆ. ವಿದುಷಿ ರೇಖಾ ಸುಬ್ರಹ್ಮಣ್ಯ ಮತ್ತು ತಂಡದಿಂದ ಪಂಚವೀಣಾ ವಾದನ, ವಿದುಷಿ ಸೋಹಿನಿ ಬೋಸ್ ಬ್ಯಾನರ್ಜಿ ಅವರಿಂದ ಒಡಿಸ್ಸಿ-ಕೂಚಿಪುಡಿ-ಭರನಾಟ್ಯ (ತ್ರಿವೇಣಿ) ನೃತ್ಯ ಪ್ರದರ್ಶನ ವಿಶೇಷವಾಗಿರಲಿದೆ. ಪಂಚಿತ್ ಕುತ್ಲೇ ಖಾನ್ ಹಾಗೂ ವಿದುಷಿ ರಸಿಕಾ ಶೇಖರ್ ತಂಡದಿಂದ ಪ್ರೊಜೆಕ್ಸ್ ಜುಗಲ್ ಬಂದಿ ಇರಲಿದೆ ಎಂದು ಹೇಳಿದರು.
ಅ.21ರಂದು ವಿದ್ವಾನ್ ಡಾ.ಸಿ.ಎ.ಶ್ರೀಧರ್ ಅವರಿಂದ ಶಾಸ್ತ್ರೀಯ ವೇಣುವಾದನ, ಶಿಲ್ಪಾ ಮುಡಬಿ ಅವರಿಂದ ಮರೆತ ಮಣ್ಣಿನ ಹಾಡುಗಳು, ವಿದ್ವಾನ್ ರಾಜೇಶ್ ವೈದ್ಯ, ವಿದ್ವಾನ್ ಯು. ರಾಜೇಶ್ ಅವರಿಂದ ವೀಣಾ-ಮ್ಯಾಂಡೋಲಿನ್ ಜುಗಲ್ ಬಂದಿ ಇರಲಿದೆ ಎಂದರು.
ಅ.22ರಂದು ಅವಳಿ ಸಹೋದರಿಯರಾದ ನಿಸರ್ಗ-ವಿಸ್ಮಯ ಮತ್ತು ತಂಡ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದೆ. ಬಳಿಕ ಈ ಬಾರಿ ದಸರಾ ಉದ್ಘಾಟಿಸಲಿರುವ ಹಂಸಲೇಖ ಮತ್ತು ತಂಡದಿಂದ ಜಯಹೇ ನಾಲ್ವಡಿ-ಹಾಡು ಹಬ್ಬ ಪ್ರಸ್ತುತಪಡಿಸಲಾಗುವುದು ಎಂದು ವಿವರಿಸಿದರು.
ವಿವಿಧ ವೇದಿಕೆ ಕಾರ್ಯಕ್ರಮ:
ಅರಮನೆ ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ 9 ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮ ಜರುಗಲಿವೆ. ಜಗನ್ಮೋಹನ ಅರಮನೆ, ಕಲಾಮಂದಿರ, ಚಿಕ್ಕಗಡಿಯಾರ, ಪುರಭವನ, ಗಾನಭಾರತೀ, ನಾದಬ್ರಹ್ಮ ಸಂಗೀತ ಸಭಾ, ಕಿರು ರಂಗಮಂದಿರ, ನಟನ ರಂಗಮಂದಿರ, ರಮಾಗೋವಿಂದ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಅಲ್ಲದೆ, ಸಂಚಾರಿ ವಾಹನ ಕಲಾ ತಂಡದಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಉಪ ಸಮಿತಿಗಳು ಹೊರತಂದಿರುವ ಆಹ್ವಾನಪತ್ರಿಕೆ, ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಮುಡಾ ಆಯುಕ್ತ ದಿನೇಶ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net