ಮಿನಿ ವಿಧಾನಸೌಧದಲ್ಲಿ ಜಲಬಾಧೆ ಸಂಕಟ!

04rmd2
Published on

ರಾಮದುರ್ಗ: ಒಂದೇ ಕಡೆ ಎಲ್ಲ ಕಚೇರಿಗಳು ದೊರೆಯಲಿ ಎಂಬ ಉದ್ದೇಶದಿಂದ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಆದರೆ, ಕಚೇರಿ ಕೆಲಸಕ್ಕೆಂದು ಬರುವ ಸಾವಿರಾರು ಜನರಿಗೆ ಜಲಬಾಧೆ ತೀರಿಸಿಕೊಳ್ಳಲು ಮೂತ್ರಾಲಯ ಇಲ್ಲದೇ ಇರುವ ಕಾರಣಕ್ಕೆ ಜನರು ಪರದಾಡುವಂತಾಗಿದೆ.

ಪಟ್ಟಣದಲ್ಲಿ 2009ರಲ್ಲಿ ಮಿನಿ ವಿಧಾನಸೌಧ ಆರಂಭಗೊಂಡಿದೆ. ಆವಾಗಿನಿಂದಲೂ ಮೂತ್ರಾಲಯ ಸಮಸ್ಯೆ ಇದೆ. ಇದೀಗ ಸಬ್ ರಜಿಸ್ಟ್ರಾರ್, ಭೂಮಾಪನ, ತಹಸೀಲ್ದಾರ್, ಖಚಾಂಚಿ, ರೇಕಾರ್ಡ್ ಆಫೀಸ್, ಸಿಟಿ ಸರ್ವೇ, ರೇಷ್ಮೆ ಇಲಾಖೆ, ಹಿಂದುವಳಿದ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ಇನ್ನೂ ಅನೇಕ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ನಿತ್ಯ ಸಾವಿರೂ ಜನರು ವಿಧಾನಸೌಧಕ್ಕೆ ಕೆಲಸದ ನಿಮಿತ್ತ ಬರುತ್ತಾರೆ.

ಹೀಗೆ ಬಂದವರಿಗೆ ಜಲಬಾಧೆ ಬಂದರೆ ಅವರ ಪರದಾಟ ಹೇಳ ತೀರದ್ದಾಗಿದೆ. ಯಾಕೆಂದರೆ ಸೌಧದಲ್ಲಿ ಇರುವ ಎರಡು ಶೌಚಗೃಹಗಳು ದುರಸ್ತಿಯಲ್ಲಿವೆ. ಇವುಗಳು ಇದೀಗ ನಿರುಪಯುಕ್ತ ವಸ್ತುಗಳನ್ನು ಇಡುವ ಸ್ಥಳಗಳಾಗಿವೆ. ಇನ್ನೂ ಕಚೇರಿ ಕೆಲಸಕ್ಕೆಂದು ಬರುವ ಮಹಿಳೆಯರ ಸ್ಥಿತಿ ಶೋಚನೀಯ. ಆದರೆ, ಮಹಿಳಾ ಸಿಬ್ಬಂದಿಗೆ ಒಂದು ಶೌಚಗೃಹ ಇದ್ದು, ಬಳಕೆ ನಂತರ ಅದನ್ನು ಕೀಲಿ ಹಾಕಿಕೊಂಡು ಹೋಗುತ್ತಾರೆ. ಶೌಚಗೃಹ ದುರಸ್ತಿ ಮಾಡಲು ಮುಂದಾಗದೇ ಇರುವ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಶೌಚಗೃಹವೂ ಇಲ್ಲ: ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹಗಳು ಇರಬೇಕು. ಆದರೆ, ನಿತ್ಯ ಸಾವಿರಾರು ಜನರು ಆಗಮಿಸುವ ಮಿನಿ ವಿಧಾನಸೌಧ ಆವರಣದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಇಲ್ಲದೇ ಇರುವುದು ಖೇದಕರ ಸಂಗತಿ. ಹೀಗಾಗಿ ಜನರು ಜಲಬಾಧೆ ತೀರಿಸಿಕೊಳ್ಳಲು ಸಂಧಿ-ಗೊಂದಿ ಹುಡುಕುತ್ತ ಹೋಗುವುದು ಅನಿವಾರ್ಯವಾಗಿದೆ. ಈ ಸಂಗತಿಗಳು ತಹಸೀಲ್ದಾರ್ ಸೇರಿ ಎಲ್ಲ ಅಧಿಕಾರಿ ವರ್ಗಕ್ಕೂ ತಿಳಿದರೂ ಸಾರ್ವಜನಿಕ ಶೌಚಗೃಹ ನಿರ್ಮಿಸದೇ ಇರುವುದು ವಿಷಾದನೀಯ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಶೌಚಗೃಹ ನಿರ್ಮಿಸಿ ಬರುವ ಸಾರ್ವಜನಿಕರ ಅನುಕೂಲ ಮಾಡಿಕೊಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net