

ರಾಮ ಕಿಶನ್ ಕೆ.ವಿ. ಬೆಂಗಳೂರು
ನಮ್ಮ ಮೆಟ್ರೋ ನಿಲ್ದಾಣಗಳು ಆತ್ಮಹತ್ಯೆ ತಾಣಗಳಾಗಿ ಬದಲಾಗುತ್ತಿವೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಳೆದ 6 ತಿಂಗಳ ಅವಧಿಯಲ್ಲಿ ವಿವಿಧ ನಿಲ್ದಾಣಗಳಲ್ಲಿ ಆತ್ಮಹತ್ಯೆ ಯತ್ನಗಳು ನಡೆದಿದ್ದು, ಭದ್ರತಾ ಸಿಬ್ಬಂದಿಗಳಿಗೆ ಪ್ರಯಾಣಿಕರ ಚಲನವಲನ ಗಮನಿಸುವುದೇ ದೊಡ್ಡ ಸವಾಲಾಗಿದೆ. ಇದಕ್ಕೆ ಪರಿಹಾರೋಪಾಯವಾಗಿ ಸ್ವಯಂಚಾಲಿತ ಪ್ರವೇಶ ದ್ವಾರವನ್ನು (ಸ್ಕ್ರೀನ್ಡೋರ್) ಎಲ್ಲೆಡೆ ಅಳವಡಿಸಲು ಬಿಎಂಆರ್ಸಿಎಲ್ ಯೋಜನೆ ರೂಪಿಸಬೇಕಿದೆ ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಹೊಸಹಳ್ಳಿ ನಿಲ್ದಾಣದಲ್ಲಿ ಸೋಮವಾರ ಯುವಕನೊಬ್ಬ ಪ್ಲಾಟ್ಫಾರ್ಮ್ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವುದು 'ನಮ್ಮ ಮೆಟ್ರೋ'ದಲ್ಲಿನ ಭದ್ರತಾ ಲೋಪದೋಷಗಳ ಮೇಲೆ ಮತ್ತೆ ಬೊಟ್ಟು ಮಾಡಲು ಮಾಡುವಂತಾಗಿದೆ.
ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಪಿಎಸ್ಡಿ (ಪ್ಲಾಟ್ಫಾರ್ಮ್ ಸ್ಕ್ರೀನ್ಡೋರ್) ಅಳವಡಿಕೆ ಮಾಡಲಾಗಿದೆ. ಆದರೆ, ನಮ್ಮ ಮೆಟ್ರೋ ಆರಂಭವಾಗಿ 13 ವರ್ಷಗಳು ಕಳೆದಿದ್ದರೂ ಪ್ಲಾಟ್ಫಾರ್ಮ್ನಲ್ಲಿ ಆ ತರನಾದ ಭದ್ರತಾ ಕ್ರಮಗಳನ್ನು ಅನುಷ್ಠಾನ ಮಾಡಿಲ್ಲ. ಸದ್ಯ ಇಂಟರ್ಚೇಂಜ್ ನಿಲ್ದಾಣವಾದ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ (ಮೆಜೆಸ್ಟಿಕ್) ನೇರಳೆ ಮಾರ್ಗ ಹಾದುಹೋಗುವ ಪ್ಲಾಟ್ಫಾರ್ಮ್ನಲ್ಲಿ ಸ್ಟೀಲ್ ರೇಲಿಂಗ್ಸ್ಗಳನ್ನು ಅಳವಡಿಸಲಾಗಿದೆ. ಇದೇ ಕ್ರಮವನ್ನು ಎಲ್ಲೆಡೆ ಅನುಸರಿಸಬೇಕು ಎಂದು ಜನರು ಸಲಹೆ ನೀಡುತ್ತಿದ್ದಾರೆ.
ರೈಲು ಬರುವವರೆಗೆ ಪ್ಲಾಟ್ಫಾರ್ಮ್ನಲ್ಲಿರುವ 'ಸ್ಕ್ರೀನ್ ಡೋರ್' ಮುಚ್ಚಿಕೊಂಡಿರುತ್ತದೆ. ಆ ವೇಳೆ ಯಾರೂ ಹಳಿಯತ್ತ ಸಾಗಲು ಸಾಧ್ಯವಿಲ್ಲ. ರೈಲು ಆಗಮನವಾದಾಗ ಸ್ಕ್ರೀನ್ ಡೋರ್ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ಪ್ರಯಾಣಿಕರು ಒಳಪ್ರವೇಶಿಸಿ, ರೈಲು ತೆರಳಿದ ಬಳಿಕ ಸ್ಕ್ರೀನ್ ಡೋರ್ ಮತ್ತೆ ಮುಚ್ಚಿಕೊಳ್ಳುತ್ತದೆ.
ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು 5 ವರ್ಷದ ನಿರ್ವಹಣೆ ಸೇರಿ ಸಿಗ್ನಲಿಂಗ್, ನಿಯಂತ್ರಣ, ಕಂಟ್ರೋಲಿಂಗ್ ಮತ್ತು ಪ್ಲಾಟ್ಫಾರ್ಮ್ನಲ್ಲಿ ಸ್ಕ್ರೀನ್ಡೋರ್ ವಿನ್ಯಾಸ ನಿರ್ಮಾಣಕ್ಕಾಗಿ ಬಿಎಂಆರ್ಸಿಎಲ್ ಈಗಾಗಲೇ ಟೆಂಡರ್ ಆಹ್ವಾನಿಸಿದೆ. ಇದನ್ನು ನೇರಳೆ ಮಾರ್ಗ ಹಂತ&2, 2ಎ ಮತ್ತು 2ಬಿ ಯೋಜನೆಯಲ್ಲಿ ಬರುವ ನಿಲ್ದಾಣ, ಗೊಟ್ಟಿಗೆರೆ&ನಾಗವಾರ (ಗುಲಾಬಿ ಮಾರ್ಗ) ಮಾರ್ಗಗಳಲ್ಲಿ ಅಳವಡಿಸಲಾಗುತ್ತದೆ. ಜತೆಗೆ ಇನ್ಫೋಸಿಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಎಲೆಕ್ಟ್ರಾನಿಕ್ಸ್ ಸಿಟಿ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲೂ ಪಿಎಸ್ಡಿ ಅಳವಡಿಸಲಾಗುತ್ತದೆ.
ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ನಮ್ಮ ಮೆಟ್ರೋ ರೈಲು ನಿಲ್ದಾಣಗಳ ಪ್ಲಾಟ್ಫಾರ್ಮ್ಗಳು ಕೃತ್ಯಕ್ಕೆ ಆಹ್ವಾನ ನೀಡುವಂತಿವೆ. 2012ರ ಮಾರ್ಚ್ನಲ್ಲಿ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಸೇಂಟ್ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. ಬಳಿಕ ಕಳೆದ ಮಾ.21ರಂದು ಅತ್ತಿಗುಪ್ಪೆ ನಿಲ್ದಾಣದಲ್ಲಿ ಮಹಾರಾಷ್ಟ್ರ ಮೂಲದ ಧ್ರುವ್ ಠಕ್ಕರ್ ಬದುಕನ್ನು ಕೊನೆಗೊಳಿಸಿಕೊಂಡಿದ್ದ. ಇದಲ್ಲದೆ ರೈಲು ಬರುವಾಗ ಸೆಲ್ಫಿ&ರೀಲ್ಸ್ ಹುಚ್ಚು ಕೂಡ ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ.