ದೊಡ್ಡಬಳ್ಳಾಪುರದಲ್ಲಿ ಅಖಂಡ ಕರ್ನಾಟಕ ಬಂದ್‌ಗಿಲ್ಲ ಬೆಂಬಲ

3
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಪರಿಷತ್‌ನಲ್ಲಿ ಬಂದ್ ಕುರಿತು ಕನ್ನಡಪರ, ರೈತಪರ ಸಂಘಟನೆಗಳ ಮುಖಂಡರು ಸಭೆ ನಡೆಸಿದರು. ಕಜಾಪ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಕನ್ನಡಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಮುಖಂಡರಾದ ಮುತ್ತೇಗೌಡ, ಸತೀಶ್, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ನರಸಿಂಹಮೂರ್ತಿ, ಪರಮೇಶ್ ಇದ್ದರು.
Published on

ಪರೀಕ್ಷೆಗಳು ನಡೆಯುತ್ತಿರುವುದರಿಂದ ತೊಂದರೆಯಾಗದಂತೆ ಪ್ರತಿಭಟನೆ - ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷರ ಹೇಳಿಕೆ

ದೊಡ್ಡಬಳ್ಳಾಪುರ: ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆ ಖಂಡಿಸಿ ಹಾಗೂ ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರವನ್ನು ಒತ್ತಾಯಿಸಲು ಮಾ.22ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳಿಂದ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಹೋರಾಟಕ್ಕೆ ದೊಡ್ಡಬಳ್ಳಾಪುರದ ಕನ್ನಡಪರ ಸಂಘಟನೆಗಳಿಂದ ಬೆಂಬಲ ಸೂಚಿಸಲಾಗುತ್ತಿದೆ. ಆದರೆ, ದೊಡ್ಡಬಳ್ಳಾಪುರದಲ್ಲಿ ಬಂದ್ ಆಚರಿಸದೆ ಇರಲು ನಿರ್ಧರಿಸಲಾಗಿದೆ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ತಿಳಿಸಿದ್ದಾರೆ.

ಕರ್ನಾಟಕ ಬಂದ್ ಕುರಿತಂತೆ ನಗರದ ಕನ್ನಡ ಜಾಗೃತ ಭವನದಲ್ಲಿ ಗುರುವಾರ ನಡೆದ ವಿವಿಧ ಕನ್ನಡಪರ ಹಾಗೂ ರೈತ ಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳ ಮುಖಂಡರ ಅಭಿಪ್ರಾಯದಂತೆ, ಬಂದ್ ಆಚರಿಸದೇ ಪ್ರತಿಭಟನೆ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಪ್ರಸ್ತುತ ಎಸ್ಸೆಸ್ಸೆಲ್ಸಿ ಹಾಗೂ ಕಾಲೇಜು ಪರೀಕ್ಷೆಗಳು ನಡೆಯುತ್ತಿವೆ. ಬಂದ್‌ನಿಂದಾಗಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುವುದು ಬೇಡ ಎಂದು ಈ ನಿರ್ಧಾರ ಮಾಡಲಾಗಿದೆ ಎಂದರು.

ಬೆಳಗಾವಿಯಲ್ಲಿ ಕನ್ನಡ ಮಾತನಾಡಿ ಎಂದ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನ ಮೇಲೆ ಹಲ್ಲೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ಪ್ರಕರಣ ಕನ್ನಡಿಗರ ಸ್ವಾಭಿಮಾನ ಕೆಣಕಿವೆ. ಬೆಳಗಾವಿಯಲ್ಲಿ ಸದಾ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಎಂ.ಇ.ಎಸ್ ಮತ್ತು ಶಿವಸೇನೆ ಸಂಘಟನೆ ನಿಷೇಧಿಸಬೇಕು. ಹಲ್ಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆಯಾಗಿ ಎಂ.ಇ.ಎಸ್ ಪುಂಡರನ್ನು ಗಡಿಪಾರು ಮಾಡಬೇಕು. ನಾಡಿನ ನೆಲ, ಜನ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ನಿಲ್ಲಬೇಕು. ಪರಭಾಷಿಕರ ದಬ್ಬಾಳಿಕೆ ನಿಲ್ಲಬೇಕು. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಬೇಕು. ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸಲು ಹೋರಾಟ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ

ಸಭೆಯ ನಿರ್ಣಯ ಪ್ರಕಟಿಸಿದ ಮುಖಂಡರು, ಮಾ.22ರಂದು ಬೆಳಗ್ಗೆ 10 ಗಂಟೆಗೆ ತಾಲೂಕಿನ ಕನ್ನಡಪರ ಹಾಗೂ ರೈತ ಪರ ಸಂಘಟನೆಗಳಿಂದ ನಗರದ ಸಿದ್ದಲಿಂಗಯ್ಯ ವೃತ್ತದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಗುವುದು. ಶನಿವಾರ ಸರ್ಕಾರಿ ರಜೆ ಇರುವ ಕಾರಣ ಮಾ.21ರಂದು ಬೆಳಗ್ಗೆ 10.30ಕ್ಕೆ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಸಮಾವೇಶಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಬಂದ್‌ಗೆ ನಮ್ಮ ಬೆಂಬಲವಿಲ್ಲ ತಾಲೂಕಿನ ಇತರ ಸಂಘಟನೆಗಳು ಬಂದ್ ಮಾಡಲು ಹೊರಟು, ಯಾವುದೇ ತೊಂದರೆಗಳಾದರೆ ನಮ್ಮ ಸಂಘಟನೆಗಳು ಹೊಣೆಯಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net