

ಬೆಳಗಾವಿ: ಶ್ರಾವಣ ಮಾಸದ ಮಧ್ಯಂತರದಲ್ಲಿ
ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು-ನೋವು ಸಂಭವಿಸುತ್ತದೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ದೇಶಗಳು ನಾಶ ಆಗುತ್ತದೆ ಎಂದು ಬೆಳಗಾವಿಯಲ್ಲಿ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ. ದಕ್ಷಿಣ ಭಾರತದಲ್ಲಿ ಸಮೃದ್ಧಿಯಾಗುವ ಲಕ್ಷಣಗಳಿವೆ, ಯಾವುದೇ ತೊಂದರೆಯಿಲ್ಲ. ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯಕಾರಿ ಆಗುತ್ತದೆ. ಇದ್ದಕ್ಕಿದ್ದಂತೆ ಜನರ ಸಾವಾಗುವ ಆತಂಕವಿದೆ. ಜಾಗತಿಕ ಮಟ್ಟದಲ್ಲಿ ವಿಷಾನೀಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಜಗತ್ತಿನ ಸಾಮ್ರಾಟಗಳ ತಲ್ಲಣಗೊಳ್ಳುವ ಪ್ರಸಂಗವೂ ಇದೆ. ಅದರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಚಂದ್ರಯಾನ-3 ಯಶಸ್ವಿಯಾಗಿ ಒಳ್ಳೆಯದಾಗಲಿದೆ. ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು.
ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ. ಇಲ್ಲವಾದರೆ ಆಪತ್ತು, ಸಾವುಗಳು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ, ಪ್ರಕೃತಿ ನಿಯಮವದು. ಪ್ರಾಕೃತಿಕ ದೋಷದಿಂದಲೇ ಸಾವುನೋವು ಹೆಚ್ಚುತ್ತಿವೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗುತ್ತಿದೆ, ಕೆಮಿಕಲ್ ಮಿಶ್ರಿತ ಆಹಾರ ಸೇವನೆ ಹೆಚ್ಚುತ್ತಿದೆ. ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಮೊದಲು ಬೆಳೆಯಲಾಗುತ್ತಿತ್ತು. ಈಗ ಕೆಮಿಕಲ್ ಸಿಂಪಡಣೆ ಹೆಚ್ಚುತ್ತಿದೆ, ಹಣ್ಣಿಗೂ ಕೆಮಿಕಲ್ ಹಾಕಲಾಗುತ್ತಿದೆ ಎಂದರು.
ರಾಜಕಾರಣದ ಬಗ್ಗೆ ಏನೂ ಹೇಳಲ್ಲ, ಆದರೆ ಸರ್ಕಾರಕ್ಕೆ ತೊಂದರೆಯಿಲ್ಲ. ಪಕ್ಷಾಂತರ ಬಗ್ಗೆಯೂ ಚುನಾವಣೆ ಪೂರ್ವವೇ ಹೇಳಿದ್ದೇನೆ. ರಾಜಕೀಯ ಅಲ್ಲೋಲ, ಕಲ್ಲೋಲ ಆಗಲಿದೆ ಎಂದು ಹೇಳಿದ್ದೆ ಈಗ ಅಸ್ಥಿರತೆ ಉಂಟಾಗುತ್ತಿದೆ. ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇವರದ್ದು ಮುಗಿಲಿ, ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಬೇಕು. ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.