

ಕೂಡ್ಲಿಗಿ: ತಾಲೂಕಾದ್ಯಂತ ಶನಿವಾರ ಸುರಿದ ಕೃತ್ತಿಕಾ ಮಳೆಗೆ ರೈತರು ಖಷಿಗೊಂಡಿದ್ದಾರೆ. ಬಿತ್ತನೆಗೆ ಜಮೀನನ್ನು ಹದ ಮಾಡಿಕೊಳ್ಳಲು ನೆರವಾಗಿದೆ. ಮೇ 24 ರಂದು ರೋಹಿಣಿ ಮಳೆ ಆರಂಭವಾಗಲಿದ್ದು, ರೈತರು ಬಿತ್ತನೆ ಶುರು ಮಾಡಲಿದ್ದಾರೆ.
ಶನಿವಾರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಹದ ಮಳೆಯಾಗಿದ್ದು, ರೈತರಿಗೆ ಖುಷಿ ತಂದಿದೆ. ಶಿವಪುರ ಹಾಗೂ ಜಂಗಮಸೋವೆನಹಳ್ಳಿಯಲ್ಲಿ ಹಳ್ಳಗಳು ತುಂಬಿ ಹರಿದಿವೆ. ಹೊಲಗಳೂ ಮಳೆ ನೀರಿನಿಂದ ಆವೃತ್ತವಾಗಿವೆ. ಬಿಸಿಲಿನ ತೀವ್ರತೆಗೆ ಕೊಳವೆ ಬಾವಿಗಳ ನೀರು ಕುಸಿತಗೊಂಡಿದ್ದು, ಉತ್ತಮ ಮಳೆಯಿಂದ ಹಳ್ಳಗಳು ತುಂಬಿ ಅಂತರ್ಜಲ ಹೆಚ್ಚಳವಾಗಲಿದೆ ಎಂದು ಜಂಗಮ ಸೋವೆನಹಳ್ಳಿಯ ರೈತ ಬಣಕಾರ ಕೊಟ್ರೇಶ್ ತಿಳಿಸಿದರು.
ಭಾನುವಾರವೂ ಸಹ ವರುಣನ ಆರ್ಭಟ ಮುಂದುವರೆದಿದ್ದು ಪಟ್ಟಣದಲ್ಲಿ ಅಪರಾಹ್ನ ಸಾಧರಣ ಮಳೆ ಸುರಿಯಿತು. ಕಳೆದೊಂದು ವಾರದಿಂದ ಮಳೆಯಾಗುತ್ತಿರುವುದು ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮೂರು ತಿಂಗಳಿನಿಂದ ಅತ್ಯಧಿಕ ಬಿಸಿಲಿಗೆ ಬಳಲಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೂಡ್ಲಿಗಿ- 29.4 ಮಿಮೀ, ಗುಡೇಕೋಟೆ 14.2, ಹೊಸಹಳ್ಳಿ 14.3 ಸೇರಿ ಒಟ್ಟು 11.58 ಮಳೆಯಾದ ವರದಿಯಾಗಿದೆ.