ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕತೆಗೆ ತಕ್ಕಂತೆ ಬದಲಾವಣೆ ಅಗತ್ಯ

BIRUR techer
ಬೀರೂರು ವಲಯದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಬಿ.ಎನ್.ಪರಮೇಶ್ವರಪ್ಪ, ಎಸ್.ಎಂ.ಶಿವಕುಮಾರ್, ಮಹೇಶ್, ಬಿ.ಕೆ.ಶಶಿಧರ್, ಜ್ಯೋತಿ, ಎಚ್.ಕವಿತಾ, ವಿ.ಗೀತಾ ಇತರರಿದ್ದರು.
Published on

ಬೀರೂರು: ಗುಣಮಟ್ಟದ ಶಿಕ್ಷಣ ಲಭಿಸುವುದು ಸರ್ಕಾರಿ ಶಾಲೆಗಳಲ್ಲಿ ಎಂಬುದನ್ನು ಎಲ್ಲರೂ ಮನದಲ್ಲಿಟ್ಟುಕೊಳ್ಳಬೇಕು. ಆಧುನಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಗುರುಭವನದಲ್ಲಿ ಮಂಗಳವಾರ ಬೀರೂರು ಶೈಕ್ಷಣಿಕ ತಾಲೂಕು ಮಟ್ಟದ 62ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಕರಿಂದ ಪ್ರೇರೇಪಿತರಾಗಿರುತ್ತಾರೆ. ವಿದ್ಯಾರ್ಥಿಗಳ ಯಶಸ್ಸನ್ನು ಕಂಡು ಹೆಮ್ಮೆ ಪಡುವ ಶ್ರೇಷ್ಠ ಸ್ಥಾನ ಶಿಕ್ಷಕರದ್ದು. ಶಿಕ್ಷಕರು ಸುಜ್ಞಾನದ ಹಾದಿಯಲ್ಲಿ ನಡೆಸುವ ಮಾರ್ಗದರ್ಶಕರು. ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ನಮ್ಮ ಕಲಿಕೆಯ ಪಯಣದಲ್ಲಿ ಅಳಿಸಲಾಗದ ಗುರುತುಗಳು. ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಸಾಧನ ಎಂದರು.
ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಬಳಸಿಕೊಳ್ಳದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿ ಕನ್ನಡ ಶಾಲೆಗಳಲ್ಲಿ ದಾಖಲಾತಿ ಕುಂಠಿತವಾಗುತ್ತಿದೆ. ಇತ್ತೀಚೆಗೆ ಇಸ್ರೋ ಸಂಸ್ಥೆ ನಡೆಸಿದ ಚಂದ್ರಯಾನ-3ರಲ್ಲಿ ಕರ್ತವ್ಯ ನಿರ್ವಹಿಸಿದ ಬಹಳಷ್ಟು ವಿಜ್ಞಾನಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿತವರು ಎಂಬುದನ್ನು ಜನತೆ ಗಮನಿಸಬೇಕಾಗಿದೆ ಎಂದು ತಿಳಿಸಿದರು.
ಬೆಂಗಳೂರು ಜ್ಞಾನಭಾರತಿ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಮಾತನಾಡಿ, ತರಗತಿಯ ಆಚೆಗೆ ಮಕ್ಕಳನ್ನು ಪ್ರೇರೇಪಿಸುವ ಅದ್ಭುತ ಸಾಮರ್ಥ್ಯ ಶಿಕ್ಷಕರು ಬೆಳೆಸಿಕೊಳ್ಳಬೇಕು. ಅಂಥ ಸಾಮರ್ಥ್ಯವು ಜ್ಞಾನ ನೀಡುವುದರ ಜತೆಗೆ ಕುತೂಹಲ ಮತ್ತು ಸೃಜನಶೀಲತೆಯ ಜ್ವಾಲೆ ಹೊತ್ತಿಸುತ್ತದೆ. ನಿರಂತವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಕಲಿಯುವುದು, ಹೊಂದಿಕೊಳ್ಳುವುದು ಮತ್ತು ಅಭಿವೃದ್ಧಿ ಹೊಂದುವುದು ಹೇಗೆ ಎಂದು ಕಲಿಸುವವರು ಶ್ರೇಷ್ಠ ಶಿಕ್ಷಕರಾಗುತ್ತಾರೆ. ಇಂದಿನ ಕಾಲಕ್ಕೆ ತಕ್ಕಂತೆ ಸಾಮಾನ್ಯ ಜ್ಞಾನವನ್ನೂ ಕಲಿಸಬೇಕು. ಮಕ್ಕಳ ಉದ್ಧಾರವೇ ಧ್ಯೇಯವಾಗಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎನ್.ಪರಮೇಶ್ವರಪ್ಪ, ಎಸ್.ಎಂ.ಶಿವಕುಮಾರ್, ಮಲ್ಲಿಕಾರ್ಜುನ್, ಮಹೇಶ್ ಮಾತನಾಡಿದರು.
ಹಳೇಪೇಟೆ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಿಂದ ಗುರುಭವನದವರೆಗೆ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಸಾರೋಟ್‌ನಲ್ಲಿ ಮೆರವಣಿಗೆ ನಡೆಸಲಾಯಿತು. ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಕೂಡ ಕಾರ್ಯಕ್ರಮಕ್ಕೆ ಹಾಜರಾಗಿ ಪುಷ್ಪ ನಮನ ಸಲ್ಲಿಸಿದರು. ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಜ್ಯೋತಿ, ಬಿ.ಆರ್.ಮೋಹನ್‌ಕುಮಾರ್, ಲಕ್ಷ್ಮಣ್, ಲೋಕೇಶಪ್ಪ, ಮುಖಂಡರಾದ ಬಾವಿಮನೆ ಮಧು, ವಿನಾಯಕ್, ಶಿಕ್ಷಕರಾದ ಮಾದಯ್ಯ, ಜನಾರ್ದನ್, ಎಚ್.ಕವಿತಾ, ವಿ.ಗೀತಾ, ವೈ.ಎಂ.ತಿಪ್ಪೇಶ್, ಉಮಾ ಮಹೇಶ್, ಜಗದೀಶ್ ಕೆ.ಹಿರೇಮಠ್ ಮತ್ತು ಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net