

ಚನ್ನರಾಯಪಟ್ಟಣ: ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್‌ಡೌನ್ ಆದೇಶಕ್ಕೆ ತಾಲೂಕಿನ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು.
ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯ ಹೋಬಳಿ ಕೇಂದ್ರಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್‌ಗಳು ಹೊರತುಪಡಿಸಿ ಯಾವುದೇ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿರಲಿಲ್ಲ.
ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಸರಬರಾಜು ಮಾಡುವ ವಾಹನಗಳನ್ನು ಹೊರತುಪಡಿಸಿ ಇತರ ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಜತೆಗೆ ಸಾರ್ವಜನಿಕರು ಮನೆಯಲ್ಲಿಯೇ ಉಳಿಯುವ ಮೂಲಕ ಲಾಕ್‌ಡೌನ್ ಆದೇಶಕ್ಕೆ ಸ್ವಂದಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ 14 ದಿನಗಳವರೆಗೆ ಲಾಕ್‌ಡೌನ್ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು ವಾರದಲ್ಲಿ ಮೂರು ದಿನ ಮಾತ್ರ ಬೆಳಗ್ಗೆ 7 ರಿಂದ 11.30 ರವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಪ್ರತಿ ಭಾನುವಾರದ ಲಾಕ್‌ಡೌನ್ ಮಾಡಲು ಸರ್ಕಾರ ಆದೇಶ ಹೊರಡಿಸಿದ್ದರೆ, ವಾರದಲ್ಲಿ ಮೂರು ದಿನ ಲಾಕ್‌ಡೌನ್ ಮಾಡಲು ತಾಲೂಕು ಆಡಳಿತ ಮುಂದಾಗಿದೆ. ಸದ್ಯ ಸರ್ಕಾರ ಹೇರಿರುವ ಆದೇಶದಂತೆ ಶ್ರವಣಬೆಳಗೊಳ, ಹಿರೀಸಾವೆ, ನುಗ್ಗೇಹಳ್ಳಿ, ಕಸಬಾ, ದಂಡಿಗನಹಳ್ಳಿ ಹಾಗೂ ಬಾಗೂರು ಹೋಬಳಿ ಸೇರಿದಂತೆ ಭಾನುವಾರ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.