

ಅಥಣಿ: ಜಾತಿ ಗಣತಿ ಸಮೀಕ್ಷೆ ವೇಳೆ ಮಾಳಿ ಸಮುದಾಯದವರು ಜಾತಿ ಕಾಲಂನಲ್ಲಿ ಮಾಳಿ ಎಂದು, ಧರ್ಮದ ಕಾಲಂದಲ್ಲಿ ಹಿಂದು ಎಂದು ನಮೂದಿಸಬೇಕು ಎಂದು ರಾಜ್ಯ ಮಾಳಿ ಸಮುದಾಯದ ಖಜಾಂಚಿ ಗಿರೀಶ ಬುಟಾಳೆ ಹೇಳಿದರು.
ಪಟ್ಟಣದ ಕೇದಾರಲಿಂಗ ಹೊನ್ನೋಳಿ ದೇವಸ್ಥಾನದಲ್ಲಿ ಗುರುವಾರ ಮಾಳಿ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರ ಸೆ.22ರಿಂದ ಆರಂಭವಾಗುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಮಾಳಿ ಸಮುದಾಯದವರು ಸರಿಯಾದ ಮಾಹಿತಿ ನೀಡಬೇಕು ಎಂದರು.
ಶಿವಾನಂದ ದಿವಾನಮಳ, ಸದಾಶಿವ ಬುಟಾಳೆ ಮಾತನಾಡಿ, ಸಮೀಕ್ಷೆಯಿಂದ ಸಮುದಾಯದ ಜನಸಂಖ್ಯೆ ಮತ್ತು ಸ್ಥಿತಿಗತಿಗಳನ್ನು ಸರ್ಕಾರದ ಗಮನಕ್ಕೆ ತರಲು ಸಹಾಯ ಮಾಡುತ್ತದೆ. ಸರ್ಕಾರಿ ಸೌಲಭ್ಯ ಪಡೆಯಲು ಈಗಿರುವ 2ಎ ವರ್ಗದಲ್ಲಿ ಮೀಸಲಾತಿಗೆ ಅನುಕೂಲವಾಗಲಿದೆ. ಒಂದು ವೇಳೆ ಲಿಂಗಾಯತ ಮಾಳಿ ಬರೆಸಿದರೆ ನಾವು 3ಬಿ ಯಲ್ಲಿ ಉಳಿಯುತ್ತೇವೆ. ಆದ್ದರಿಂದ ಸರ್ಕಾರಿ ಸೌಲಭ್ಯಗಳು ಸಿಗುವುದು ಕಠಿಣವಾಗಲಿದೆ. ಹೀಗಾಗಿ, ಜಾತಿ ಕಾಲಂದಲ್ಲಿ ಮಾಳಿ ಮತ್ತು ಧರ್ಮದ ಕಾಲಂದಲ್ಲಿ ಹಿಂದು ಎಂದು ಬರೆಸಬೇಕು ಎಂದರು.
ಮಾಳಿ ಸಮುದಾಯದ ತಾಲೂಕು ಅಧ್ಯಕ್ಷ ಗಿರೀಶ ದಿವಾನಮಳ, ಬಸವರಾಜ ಗುಮಟಿ, ಮಹಾದೇವ ಹೊನ್ನೋಳಿ ಇತರರಿದ್ದರು.