ಜಾತಿಗಣತಿಯಲ್ಲಿ ಮಾದಿಗರು ಎಂದೇ ನಮೂದಿಸಲಿ

5Athanigrameen2 SPONCER
Published on

ಅಥಣಿ ಗ್ರಾಮೀಣ: ಮಾದಿಗ ಜಾತಿ ಗಣತಿಗಾಗಿ ಅಧಿಕಾರಿಗಳು ಮನೆಗೆ ಬಂದಾಗ ಜಾತಿ ಗಣತಿ ನಮೂನೆ ಕಾಲಂ ನಂ.61ರಲ್ಲಿ ಮಾದಿಗ ಸಮುದಾಯ ಎಂದು ನಮೂದಿಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ ಮನವಿ ಮಾಡಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನಿರೀಕ್ಷಣಾ ಮಂದಿರದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ರಚಿಸಿದೆ.

ಆಯೋಗವು ಪರಿಶಿಷ್ಟ ಜಾತಿಯಲ್ಲಿನ ನಿಖರವಾದ ಅಂಕಿ ಸಂಖ್ಯೆ ದತ್ತಾಂಶ ಸಂಗ್ರಹಿಸಲು ಆರಂಭಿಸಿದ್ದು, ಮೇ 17ರ ವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಮೇ 19ರಿಂದ 21ರ ವರಗೆ ವಿಶೇಷ ಶಿಬಿರ ಹಾಗೂ 23ರ ವರೆಗೆ ಸ್ವಯಂ ಘೋಷಣೆ ಆನಲೈನ್ ಮೂಲಕ ಜಾತಿಗಣತಿ ನಡೆಯಲಿದೆ ಎಂದರು.

ಅಥಣಿ ಪುರಸಭೆ ಸದಸ್ಯ ರಾವಸಾಹೇಬ ಐಹೊಳೆ ಮಾತನಾಡಿ, ಮಾದಿಗ ಸಮುದಾಯದ ಮೂರು ದಶಕದ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ. ದಾಖಲೆಯಲ್ಲಿ ಏನೇ ಇರಲಿ ಒಳ ಜಾತಿ ಬಂದಾಗ ಕಾಲಂ ನಂ.61ರಲ್ಲಿ ಮಾದಿಗ ಎಂದು ಬರೆಸಬೇಕು ಎಂದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಐಹೊಳೆ ಮಾತನಾಡಿ, ಕೂಲಿಗೆಂದು ಹೂರರಾಜ್ಯಕ್ಕೆ ತೆರಳಿದವರನ್ನು ಕರೆಸಿ ಜಾತಿಗಣತಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕಾಧ್ಯಕ್ಷ ಹನುಮಂತ ಅರ್ಧವೂರ, ಕುಮಾರ ಗಸ್ತಿ, ಸಂಗಪ್ಪ ಮಾಯನಟ್ಟಿ, ರಾಜು ರಾಜೀಂಗಳೆ, ಆನಂದ ಮಾದರ, ಪರಶುರಾಮ ಮಾದರ, ಆಕಾಶ ಮಾದರ, ಮಾರುತಿ ಸಂಗಮ, ನಾಗೇಶ ಐಹೊಳೆ, ಷಣ್ಮುಖ ಮನಗಿಣಿ, ಸಂತೋಷ ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net