

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣದ ಬಗ್ಗೆ ವಿಶೇಷ ಸಭೆ ನಡೆಸಿದವನೇ ನಾನು, ಅದಕ್ಕಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಸಲಹೆ-ಸೂಚನೆ ಕೊಟ್ಟವನು ನಾನು, ನನ್ನದೇ ಕ್ಷೇತ್ರದಲ್ಲಾದ ಹಗರಣದ ಬಗ್ಗೆ ಉದಾಹರಣೆ ಕೊಟ್ಟವನು ನಾನು, ಇದೀಗ ನನ್ನದೇ ಸಭೆಯ ಸಲಹೆ-ಸೂಚನೆ ಪಾಲಿಸದೇ ಹೋದರೆ ನನ್ನ ಇಮೇಜ್ ಏನಾಗಬೇಡ? ದಿನಾ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ; ಇದರಿಂದ ಸಾರ್ವಜನಿಕರಿಗೆ ಯಾವ ಸಂದೇಶ ಹೋಗಲಿದೆ? ಮರ್ಯಾದೆ ಎಲ್ಲಿ ಉಳಿಯಿತು….?
ಹೀಗೆ ಅಧಿಕಾರಿಗಳನ್ನು ಲೆಫ್ಟ್‌ರೈಟ್ ತೆಗೆದುಕೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ.
ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 4ನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಎಸ್‌ಪಿ ಋಷಿಕೇಶ ಸೋನಾವಣೆ ಸಹಿತ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಮುತುವರ್ಜಿ ವಹಿಸಿದವನು ನಾನು. ಇದೀಗ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸಹ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಸಭೆ ನಡೆಸಿ ಗಂಭೀರವಾಗಿ ಸಲಹೆ-ಸೂಚನೆ ನೀಡಿದ್ದೇನೆ. ಆ ವಿಷಯ ಎಲ್ಲಿಗೆ ಬಂತು? ಏನೆಲ್ಲ ಕ್ರಮವಾಗಿದೆ? ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಟಿ.ಭೂಬಾಬಲ್ ಪ್ರತಿಕ್ರಿಯಿಸುತ್ತಾ, ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಬಾಂಡ್ ರೈಟರ್ಸ್‌ಗಳನ್ನು ಬೇರೆ ತಾಲೂಕುಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಗುರುತಿನ ಚೀಟಿ ಕಡ್ಡಾಯಗೊಳಿಸಲಾಗುತ್ತಿದೆ. ಪ್ರಮುಖವಾಗಿ ಸರ್ಕಾರದ ಮಟ್ಟದಲ್ಲಾಗಬೇಕಾದ ಬದಲಾವಣೆಗಳು ಹಾಗೂ ಜಿಲ್ಲಾ ಮಟ್ಟದಲ್ಲಾಗಬೇಕಾದ ಬದಲಾವಣೆ ಬಗ್ಗೆ ಸಲಹೆ-ಸೂಚನೆ ಕೊಟ್ಟಿದ್ದು, ಜಿಲ್ಲಾ ಮಟ್ಟದಲ್ಲಾಗಬೇಕಾದ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದರಿಂದ ಸಮಾಧಾನಗೊಳ್ಳದ ಸಚಿವರು, ಏನು ಬದಲಾವಣೆಯಾಗಿದೆ? ಏನೂ ಆಗಿಲ್ಲ, ದಿನಾ ಪತ್ರಿಕೆಯಲ್ಲಿ ಬರುತ್ತಿದೆ, ಆಧಾರ್ ಕಾರ್ಡ್‌ಗೆ ಪಡಿತರ ಕಾರ್ಡ್‌ನ್ನು ಲಿಂಕ್ ಮಾಡಲು ತಿಳಿಸಲಾಗಿತ್ತು. ಆಧಾರ್ ಕಾರ್ಡ್‌ಗಳನ್ನೇ ನಕಲಿ ಮಾಡಲಾಗುತ್ತಿದೆ. ಆ ಬಗ್ಗೆ ಯಾವ ಕ್ರಮವಾಗಿದೆ? ಎಂದು ಪ್ರಶ್ನೆಗಳ ಸುರಿಮಳೆಗರಿದರು.
ಎಸ್‌ಪಿ ಋಷಿಕೇಶ ಸೋನಾವಣೆ ಮಾತನಾಡಿ, ಈಗಾಗಲೇ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಯಾವುದೇ ಭೀತಿಗೆ ಒಳಗಾಗದೆ ದೂರು ನೀಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದಾಗ, ಕೆಲವರು ಇದೊಂದು ದಂಧೆ ಮಾಡಿಕೊಂಡಿದ್ದಾರೆ. ರಾಜಿ-ಸಂಧಾನದ ಹೆಸರಲ್ಲಿ ಹಣ ಪೀಕುತ್ತಾರೆ. ಬಡ ಜನರು ಹೋದಷ್ಟು ಹೋಗಲಿ ಸಮಸ್ಯೆ ಬಗೆ ಹರಿದರೆ ಸಾಕು ಎಂದು ಹೊಂದಾಣಿಕೆಗೆ ಬಲಿಯಾಗುತ್ತಿದ್ದಾರೆ. ಬಹಳಷ್ಟು ಪ್ರಕರಣಗಳಲ್ಲಿ ಎಫ್ ಐಆರ್ ದಾಖಲಾಗುವುದೇ ಇಲ್ಲ. ಹೀಗಾಗಿ ಬೇರು ಮಟ್ಟದಲ್ಲಿಯೇ ಈ ಸಮಸ್ಯೆ ಬಗೆ ಹರಿಯಬೇಕೆಂದು ಸಚಿವರು ಸೂಚಿಸಿದರು.
ಪಕ್ಕದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿಯವರನ್ನುದ್ದೇಶಿಸಿ, ರಾಜ್ಯದಲ್ಲಿ ಇಂಥ ಅನೇಕ ಪ್ರಕರಣಗಳು ಕಂಡು ಬರುತ್ತಿವೆ. ಕೊಕಟನೂರ ದೇಸಾಯಿ ಅವರ ಆಸ್ತಿ ಯಾವನೋ ಒಬ್ಬ ಹೊಡೆದುಕೊಂಡು ಹೋಗಿದ್ದನು, ಅಥಣಿಯಲ್ಲೂ ಹೀಗೆ ಆಗಿದೆ. ನಮ್ಮದೇ ಕ್ಷೇತ್ರದ ಹಲಗಣಿಯಲ್ಲೂ ಆಗಿದೆ ಎಂದು ಸಚಿವರು ನುಡಿದರು.
ಈ ಪ್ರಕರಣವನ್ನು ನಾನಿಷ್ಟಕ್ಕೆ ಬಿಡುವುದಿಲ್ಲ. ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರೊಂದಿಗೆ ಚರ್ಚಿಸುವೆ. ಶೀಘ್ರದಲ್ಲಿಯೇ ಈ ಬಗ್ಗೆ ಪ್ರತ್ಯೇಕ ಸಭೆ ನಡೆಸುವೆ. ಅದಕ್ಕಾಗಿ ಮುಹೂರ್ತ ನಿಗದಿಗೊಳಿಸಿ. ಸುದೀರ್ಘ ಹಾಗೂ ಸಮಗ್ರ ಚರ್ಚೆಯಾಗಲಿ. ಎಲ್ಲ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.