

ಕಂಪ್ಲಿ: ದರೋಜಿ-ಕಂಪ್ಲಿ ಮೂಲಕ ಗಂಗಾವತಿ ರೈಲ್ವೆಲೈನ್ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, 31.30ಕಿ.ಮೀ. ಕಾಮಗಾರಿಗೆ 919.49ಕೋಟಿ ರೂಪಾಯಿ ನಿಗದಿಪಡಿಸಿದ್ದು, ಕೂಡಲೇ ಕಾಮಗಾರಿ ಆರಂಭಕ್ಕೆ ಅನುದಾನ ಮಂಜೂರು ಮಾಡುವಂತೆ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಒತ್ತಾಯಿಸಿದರು.
ಸ್ಥಳೀಯ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿಯಿಂದ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಅವರಿಗೆ ಕೊಪ್ಪಳದಲ್ಲಿ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿ, ಈಗಾಗಲೇ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ರೈಲ್ವೆಲೈನ್ ಕಾಮಗಾರಿ ಆರಂಭಗೊಳ್ಳಬೇಕಿದೆ. ಈ ವರ್ಷದ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲು ಮುತುವರ್ಜಿವಹಿಸಬೇಕು.
ರಾಜ್ಯ ಸರ್ಕಾರದ ಅನುದಾನಕ್ಕಾಗಿ ಸ್ಥಳೀಯ ಶಾಸಕರನ್ನು, ಬಳ್ಳಾರಿ ಸಂಸದರನ್ನು ಒತ್ತಾಯಿಸಲಾಗುವುದು. ಶತಾಯಗತಾಯ 2025ರಲ್ಲಿಯೇ ರೈಲ್ವೆ ಲೈನ್ ಕಾಮಗಾರಿ ಆರಂಭಕ್ಕೆ ಹಸಿರು ನಿಶಾನೆ ತೋರುವಂತೆ ಒತ್ತಾಯಿಸಿದರು. ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಮನವಿ ಸಲ್ಲಿಸಿದರು.
ಪದಾಧಿಕಾರಿಗಳಾದ ನಾರಾಯಣ ಇಂಗಳಗಿ, ಹಾದಿಮನಿ ಕಾಳಿಂಗವರ್ಧನ, ಗಂಗಾವತಿಯ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರು ಇತರರಿದ್ದರು.