

ಸಿಂಧನೂರು: ತಾಲೂಕಿನ ಗುಂಜಳ್ಳಿ ಗ್ರಾಮದ ಡಾ.ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿನಿ ಅನುಷ್ಕಾ ಚನ್ನಬಸಪ್ಪ ಹಿರೇಗೌಡ್ರು ಹಸಮಕಲ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ 5ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಓದಿನ ಆಸಕ್ತಿಯಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ನಗರ ಪ್ರದೇಶದವರನ್ನು ಮೀರಿಸುವಂತೆ ಪ್ರತಿಭೆ ತೋರಬಲ್ಲರು ಎಂಬುದಕ್ಕೆ ಅನುಷ್ಕಾ ಹಿರೇಗೌಡ್ರು ಸಾಕ್ಷಿ. ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 619 ಅಂಕ ಪಡೆದಿದ್ದು, ಕನ್ನಡ ವಿಷಯದಲ್ಲಿ 125, ಇಂಗ್ಲಿಷ್ 99, ಹಿಂದಿ 99, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನ 99 ಅಂಕ ಪಡೆದಿದ್ದಾರೆ.
ಇಷ್ಟೇ ಮಾರ್ಕ್ಸ್ ಪಡೆಯಬೇಕೆಂದು ನನಗೆ ಯಾವುದೇ ಒತ್ತಡ ಇರಲಿಲ್ಲ. ಶಾಲೆಯ ಶಿಕ್ಷಕರು ನನ್ನ ಓದಿನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಲ್ಲದೆ ಎಲ್ಲ ರೀತಿಯಿಂದಲೂ ನೆರವು ನೀಡಿದ್ದಾರೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಸಮಯಕ್ಕೆ ಹೆಚ್ಚು ಮಹತ್ವ ಕೊಟ್ಟು ಓದಿದರೆ ಸಾಧನೆ ಸುಲಭ. ನನ್ನ ತಂದೆ-ತಾಯಿ, ಕುಟುಂಬಸ್ಥರು ಹಾಗೂ ಶಿಕ್ಷಕರು ಹೆಮ್ಮೆಪಡುವ ರೀತಿಯಲ್ಲಿ ಮುಂದೆಯೂ ಓದಬೇಕಾದ ಹೊಣೆಗಾರಿಕೆ ನನ್ನ ಮೇಲಿದೆ ಎನ್ನುತ್ತಾರೆ ಅನುಷ್ಕಾ.
ಪಿಯುನಲ್ಲಿ ಸಹೋದರ ಟಾಪರ್: ಅನುಷ್ಕಾ ಸಿಂಧನೂರು ತಾಲೂಕಿಗೆ ಟಾಪರ್ ಆಗಿದ್ದರೆ, ಅವರ ಸಹೋದರ ಅಮರೇಶ ಚನ್ನಬಸಪ್ಪ ಕಳೆದ ತಿಂಗಳು ಪ್ರಕಟವಾದ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ 2 ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ 13ನೇ ಸ್ಥಾನ ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಕ್ಕಳ ಸಾಧನೆಗೆ ಪಾಲಕರಾದ ಚನ್ನಬಸಪ್ಪ ಹಿರೇಗೌಡ್ರು ಹಾಗೂ ಶಿವಲಿಂಗಮ್ಮ ಹಿರೇಗೌಡ್ರು ಸಂತಸ ವ್ಯಕ್ತಪಡಿಸಿದ್ದಾರೆ.