

ಹುಬ್ಬಳ್ಳಿ: ಎಪಿಎಂಸಿ- ನವನಗರ ಠಾಣೆ ಪೊಲೀಸರು ಮತ್ತು ವಕೀಲ ವಿನೋದ ಪಾಟೀಲ ನಡುವಿನ ಜಟಾಪಟಿ ಪ್ರಕರಣದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಹಾಗೂ ಒಬ್ಬರು ಕಾನ್ಸ್ಟೇಬಲ್ ವರ್ಗಾವಣೆಯಾಗಿದೆ.
ವಕೀಲ ವಿನೋದ ಪಾಟೀಲರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತನ ಸ್ನೇಹಿತರು ಬಿಡಿಸಿಕೊಳ್ಳಲು ಮುಂದಾದರು ಎಂಬ ಕಾರಣಕ್ಕೆ ಕಾನ್ಸ್ಟೇಬಲ್ ಒಬ್ಬರು ವಿನೋದ ಅವರಿಗೆ ಬೇಡಿ ಹಾಕಿದ್ದರು. ಪ್ರಕರಣದಲ್ಲಿ ನಿರ್ಲಕ್ಷ್ಯ ಕಾರಣಕ್ಕೆ ಇನ್ಸ್ಪೆಕ್ಟರ್ ಸೂರಿನ್ ಹಾಗೂ ಕಾನ್ಸ್ಟೇಬಲ್ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಸ್ಥಳ ನಿಯೋಜನೆ ಮಾಡಿಲ್ಲ. ಈ ಬಗ್ಗೆ ಇಲಾಖೆ ವಿಚಾರಣೆ ಬಾಕಿ ಇರಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಹಾಗೂ ಹು-ಧಾ ಪ್ರಭಾರ ಪೊಲೀಸ್ ಆಯುಕ್ತ ರಾಘವೇಂದ್ರ ಸುಹಾಸ್ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಎಪಿಎಂಸಿ- ನವನಗರ ಠಾಣೆ ಪ್ರಭಾರ ಠಾಣಾಧಿಕಾರಿಯಾಗಿ ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ಆನಂದ ಒನಕುದ್ರೆ ಚಾರ್ಜ್ ತೆಗೆದುಕೊಂಡಿದ್ದು, ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ.
ಪ್ರಕರಣದ ಹಿನ್ನೆಲೆ ?
ನವನಗರದ ಕರ್ನಾಟಕ ವೃತ್ತದಲ್ಲಿ ನ.25ರಂದು ರಾತ್ರಿ ರೌಡಿಶೀಟರ್ ಪ್ರವೀಣ ಪೂಜಾರಿ, ಮಲ್ಲಯ್ಯ ಹಿರೇಮಠ ಹಾಗೂ ವಿನೋದ ಪಾಟೀಲ ಹಣಕಾಸಿನ ವಿಚಾರವಾಗಿ ಪರಸ್ಪರ ಜಗಳವಾಡುತ್ತಿದ್ದರು. ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜಗಳ ಬಿಡಿಸಲು ಮುಂದಾಗಿದ್ದರು. ಆಗ ಪೊಲೀಸರ ವಿರುದ್ಧವೇ ತಿರುಗಿ ಬಿದ್ದು ವಾಗ್ವಾದ ನಡೆಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಜಗಳವಾಡುತ್ತಿದ್ದರಿಂದ ಸಂಭವನೀಯ ಅವಘಡ ತಪ್ಪಿಸಲೆಂದು ಬಂಧಿಸಿ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ವಕೀಲ ವಿನೋದ ಪಾಟೀಲರಿಗೆ ಬೇಡಿ ಹಾಕಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಧಾರವಾಡದ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಂಡು ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಸೋಮವಾರದವರೆಗೆ ಗಡುವು ನೀಡಿದ್ದರು.
ಆ ಹಿನ್ನೆಲೆಯಲ್ಲಿ ಶನಿವಾರ ಧಾರವಾಡದ ಎಸ್ಪಿ ಕಚೇರಿಯಲ್ಲಿ ಐಜಿಪಿ ರಾಘವೇಂದ್ರ ಸುಹಾಸ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಸೋಮವಾರ ಮತ್ತೆ ವಕೀಲರು ಸಭೆ ಸೇರಿ ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.