

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸರ್ಕಾರದ ವಿವಿಧ ಇಲಾಖೆಗಳಿಗೆ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಶೇ.24.01 ಅನುದಾನ ಹಂಚಿಕೆ ಮಾಡಲಾಗುತ್ತದೆ. ಆದರೆ, ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ- ಪರಿಶಿಷ್ಟ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಆ ಹಣ ಹಂಚಿಕೆಯಾಗಬೇಕು. ಕೆಲ ಇಲಾಖೆಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಶೇ.24.01ಕ್ಕೂ ಮೀರಿ ಹೆಚ್ಚು ಅನುದಾನ ವಿನಿಯೋಗವಾಗುತ್ತಿದೆ. ಅದರ ಬಗ್ಗೆ ಪರಿಶೀಲನೆ ಮಾಡುವ ಅವಶ್ಯಕತೆ ಇದೆ ಎಂದು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರೆದ ಎಸ್ಸಿಪಿ/ಟಿಎಸ್ಪಿ ಯೋಜನೆಗಳ ಅನುಷ್ಠಾನ ಪರಿಷತ್ ಸಭೆಯಲ್ಲಿ ಮಾತನಾಡಿ, ಈ ಯೋಜನೆಯಡಿ ನೀಡಲಾಗುವ ಹಣವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಔದ್ಯೋಗಿಕ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಇಲಾಖೆಗೆ ಸಮರ್ಪಕವಾಗಿ ಹಂಚಿಕೆ ಮಾಡಬೇಕು ಎಂದರು.
ರಾಜ್ಯದಲ್ಲಿನ ಒಟ್ಟು 3,004 ಸ್ಲಮ್ಳ ಪೈಕಿ 1,218 ಸ್ಲಮ್ಳಲ್ಲಿ ಎಸ್ಸಿ, ಎಸ್ಟಿ ಜನರೇ ಶೇ. 50ಕ್ಕೂ ಹೆಚ್ಚು ಇದ್ದಾರೆ. ಆದರೆ, ಅವರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಮೂಲಸೌಕರ್ಯಕ್ಕಾಗಿ 2024-25ನೇ ಸಾಲಿನ ಬಜೆಟ್ನಲ್ಲಿ ಕೇವಲ 30 ಕೋಟಿ ರೂ. ನೀಡಿದ್ದೀರಿ. ಸಮಗ್ರ ಅಭಿವೃದ್ಧಿಗೆ ಕನಿಷ್ಠ 1,000 ಕೋಟಿ ಅನುದಾನವನ್ನು ಸ್ಲಮ್ ಬೋರ್ಡ್ಗೆ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಿಂದ ಹಂಚಿಕೆಯಾಗುವ ಸಿಎ ಲ್ಯಾಂಡ್(ನಾಗರಿಕ ಸೌಲಭ್ಯ ನಿವೇಶನ)ಗಳನ್ನು ಮಿಸಲಾತಿ ಅನ್ವಯ ಪರಿಶಿಷ್ಟರಿಗೆ ಹಂಚಿಕೆ ಮಾಡುವುದು ಮತ್ತು ಸಹಾಯಧನ(ಸಬ್ಸೀಡಿ) ನೀಡುವಂತೆ ಹಿಂದೆ ಸದನದಲ್ಲಿ ಪ್ರಸ್ತಾಪ ಮಾಡಿ ಒತ್ತಾಯಿಸಿದ್ದೆ. ಮೀಸಲಾತಿ ನೀಡಲಾಗಿದೆ. ಆದರೆ ಸಹಾಯಧನ ನೀಡಿಲ್ಲ. ಕೆಐಎಡಿಬಿಯಿಂದ ಹಂಚಿಕೆಯಾಗುವ ನಿವೇಶನಗಳಲ್ಲಿ ಪರಿಶಿಷ್ಟರಿಗೆ ಶೇ.75ರಷ್ಟು ಸಹಾಯಧನ(ಸಬ್ಸಿಡಿ) ನೀಡಲಾಗುತ್ತದೆ. ನಿವೇಶನ ಪಡೆದ ಫಲಾನುಭವಿ ಸಾಲ ಪಡೆಯಲು ಬ್ಯಾಂಕಿಗೆ ತೆರಳಿದರೆ ಅಡಮಾನ ರೂಪದಲ್ಲಿ ಒಟ್ಟು ಭೂಮಿ ಮೌಲ್ಯದ ಬದಲು ಫಲಾನುಭವಿ ಭರಿಸಿದ ಶೇ.25ರಷ್ಟು ವಂತಿಕೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಇದರಿಂದ ದಲಿತ ಉದ್ದಿಮೆದಾರರಿಗೆ ಅನ್ಯಾಯವಾಗುತ್ತಿದೆ. ದಲಿತರಿಗೆ ಹಂಚಿಕೆಯಾದ ತಕ್ಷಣ ಭೂಮಿಯ ಮೌಲ್ಯ ಕುಸಿಯುತ್ತದೆಯೇ ಎಂದು ಸಭೆಯಲ್ಲಿ ಪ್ರಶ್ನಿಸಿದರು. ಕೂಡಲೇ ಈ ಕುರಿತು ಕ್ರಮವಾಗಬೇಕು. ನಿವೇಶನದ ಒಟ್ಟು ಮೌಲವನ್ನೇ ಅಡಮಾನವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.