

ಬೆಳಗಾವಿ: ಕರೊನಾ ವೈರಸ್ ನಿಯಂತ್ರಿಸುವ ಸಂಕಲ್ಪದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ನಗರ ಸೇರಿ ಜಿಲ್ಲಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು. ಜನರು ಸ್ವಯಂ ಪ್ರೇರಿತವಾಗಿ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಭಾನುವಾರವಿಡೀ ಬೆಳಗಾವಿ ಸ್ತಬ್ಧಗೊಂಡಿತ್ತು.
ಎಲ್ಲೆಲ್ಲೂ ಮೌನವೇ ಆವರಿಸಿತ್ತು. ಮೌನದೊಳಗೆ ಕುಂದಾನಗರಿ ಲೀನಗೊಂಡಿತ್ತು. ಬೆಳಗಿನ ಜಾವದಿಂದಲೇ ವಾಹನಗಳಿಂದ ಗಿಜುಗುಡುತ್ತಿದ್ದ, ನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಆಟೋರಿಕ್ಷಾ ಹಾಗೂ ಖಾಸಗಿ ವಾಹನಗಳು ರಸ್ತೆಗಿಳಿಯಲಿಲ್ಲ. ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು, ಚಲನಚಿತ್ರ ಮಂದಿರಗಳು, ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಆಸ್ಪತ್ರೆ, ಔಷಧ ಅಂಗಡಿ, ಹಾಲು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಚಟುವಟಿಕೆ ಸ್ಥಗಿತಗೊಂಡಿದ್ದವು. ಅಲ್ಲಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.
ಬಸ್ ಸಂಚಾರವೂ ಬಂದ್: ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಶಾಂತವಾಗಿತ್ತು. ಶನಿವಾರ ರಾತ್ರಿ ಬೆಂಗಳೂರು ಮತ್ತು ಮೈಸೂರಿನಿಂದ ಹೊರಟಿದ್ದ ಎರಡು ಬಸ್‌ಗಳು ಭಾನುವಾರ ಬೆಳಗ್ಗೆ ಬೆಳಗಾವಿ ತಲುಪಿದವು. ಆ ಬಸ್‌ಗಳಲ್ಲಿ ಬಂದಿಳಿದ ಪ್ರಯಾಣಿಕರ ಬ್ಯಾಗ್‌ಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಿಸಲಾಯಿತು. ಕೈಗೆ ಸೈನಿಟೈಸರ್ ಹಾಕಲಾಯಿತು. ರೈಲು ಸೇವೆಯೂ ಸ್ಥಗಿತಗೊಂಡಿತ್ತು.
ಕರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವತಿಯಿಂದ 58 ವಾರ್ಡ್ ವ್ಯಾಪ್ತಿಯಲ್ಲಿ ಇರುವ ಬಸ್ ತಂಗುದಾಣಗಳು, ದೇವಸ್ಥಾನಗಳು ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಿಸಲಾಯಿತು. ಬೆಳಗಾವಿ ನಗರದ ಪ್ರತಿ ಬಡಾವಣೆಯಲ್ಲಿ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ಕೈಗೊಂಡರು.
ಕರೊನಾ ತಡೆಯುವುದಕ್ಕಾಗಿ ವಿಮಾನಗಳ ಮೂಲಕ ಔಷಧ ಸಿಂಪಡಿಸಲಾಗುತ್ತದೆ ಎಂಬ ವದಂತಿ ಗ್ರಾಮೀಣ ಭಾಗದಲ್ಲಿ ಹರಿದಾಡಿತು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಕೂಡ ಸದ್ದು ಮಾಡಿತು. ಹಾಗಾಗಿ, ಹಳ್ಳಿಗಳಲ್ಲಿ ಕೆಲವರು ಮನೆಯಿಂದ ಹೊರಬರಲು ಹಿಂದೇಟು ಹಾಕಿದರು.
ನಗರದ ಎಲ್ಲ ಹೋಟೆಲ್‌ಗಳು ಬಂದ್ ಆಗಿದ್ದರಿಂದ ನಗರದ ಪಿಜಿ ಹಾಗೂ ಇನ್ನಿತರ ಕಡೆ ನೆಲೆಸಿದ್ದ ವಿದ್ಯಾರ್ಥಿಗಳಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಸಿಗದೆ ಪರದಾಡುವಂತಾಯಿತು. ಹಸಿವಿನಿಂದ ಬಳಲಿದ ವಿದ್ಯಾರ್ಥಿಗಳು ಹೋಟೆಲ್ ಒಂದರ ಬಾಗಿಲು ತೆಗಿಸಿ, ಲಾವ್ ಮಾಡಿಸಿಕೊಂಡು ಹಸಿವು ನೀಗಿಸಿಕೊಂಡ ವಿದ್ಯಮಾನವೂ ಘಟಿಸಿತು. ನಗರದಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರು ದಿನದ ಆಹಾರ ಸಿಗದೆ ಕಷ್ಟ ಅನುಭವಿಸಿದರು.
ಜನತಾ ಕರ್ಯ್ೂ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಇದ್ದು ಕರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸಿದ್ದಾರೆ. ಸರ್ಕಾರ ಈ ವಿಚಾರವಾಗಿ ಹೊರಡಿಸುವ ಎಲ್ಲ ಆದೇಶಗಳನ್ನೂ ಇದೇ ರೀತಿ ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು ವಿನಂತಿಸುತ್ತೇನೆ.| ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಮೂಲಕ ನಿತ್ಯ 1,587 ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ನಗರ ವ್ಯಾಪ್ತಿಯಲ್ಲಿ 200ಕ್ಕಿಂತ ಅಧಿಕ ಬಸ್‌ಗಳು ಸಂಚರಿಸುತ್ತವೆ. ಜನತಾ ಕರ್ಫ್ಯೂ ಯಶಸ್ಸಿಗಾಗಿ ಇಡೀ ದಿನ ಬಸ್ ಸೇವೆ ಸ್ಥಗಿತಗೊಳಿಸಿದ್ದೇವೆ.| ಕೆ.ಕೆ. ಲಮಾಣಿ ವಿಭಾಗೀಯ ಸಂಚಾರ ಅಧಿಕಾರಿ, ಸಾರಿಗೆ ಸಂಸ್ಥೆ, ಬೆಳಗಾವಿ