ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ 'ಇನ್​ ಸೈಟ್ಸ್​ ಕೇರ್​' ಪ್ರಶಸ್ತಿ

Manipal KMC
ಉಡುಪಿಯ ಮಣಿಪಾಲದಲ್ಲಿ ನಡೆದ ಸಮಾರಂಭದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕ್​ ಸೆಂಟರ್​ಗೆ ಡಾ. ಎಚ್​.ಎಸ್​. ಬಲ್ಲಾಳ್​ ಅವರು "ಇನ್​ ಸೈಟ್ಸ್​ ಕೇರ್​' ಪ್ರಶಸ್ತಿ ಪ್ರದಾನ ಮಾಡಿದರು. ಸಿ.ಜಿ. ಮುತ್ತಣ್ಣ, ಡಾ. ಆನಂದ್​ ವೇಣುಗೋಪಾಲ್​, ಡಾ. ಸತೀಶ್​ ಅಡಿಗ, ಡಾ.ಪ್ರಶಾಂತ್​ ಕೆ. ಅಡಿಗ, ಡಾ.ಅಂಜಲಿ ಎಸ್​. ಮುಂಡ್ಕೂರ್​, ಡಾ.ವಿದ್ಯಾಶ್ರೀ ಜಿ. ಪೂಜಾರಿ ಇದ್ದರು.
Published on

ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗ (ಮಾರ್ಕ್)ಕ್ಕೆ ಪುರಸ್ಕಾರ

ಉಡುಪಿ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಇನ್​ ಸೈಟ್ಸ್​ ಕೇರ್​ನಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಐವಿಎಫ್​ ಮತ್ತು ಫರ್ಟಿಲಿಟಿ ಫಲವತ್ತತೆಯ ಕೇಂದ್ರ ಮನ್ನಣೆಯೊಂದಿಗೆ ಪ್ರಶಸ್ತಿ ಲಭಿಸಿದೆ.

ಮಣಿಪಾಲ ಸಹಹಿತಾ ಪ್ರಜನನ ಕೇಂದ್ರ (ಎಂಎಆರ್​ಸಿ)ವು ತನ್ನ 35 ವರ್ಷದ ಸಮರ್ಪಿತ ಸೇವೆಯೊಂದಿಗೆ 10 ಸಾವಿರಕ್ಕೂ ಹೆಚ್ಚು ಶಿಶುಗಳ ಜನನಕ್ಕೆ ಕಾರಣವಾಗಿದೆ. ಕೇಂದ್ರದ ಪ್ರಯೋಗದ ಮೂಲಕ ನಡೆದ ಮೊದಲ ಶಿಶುವಿಗೆ ಈಗ 25 ವರ್ಷವಾಗಿದೆ.

ಸಾವಿರಾರು ಕುಟುಂಬಗಳಿಗೆ ಬೆಳಕು

ಮಣಿಪಾಲದ ಫಾರ್ಚೂನ್​ ಇನ್​ ವ್ಯಾಲಿ ವ್ಯೂನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಅವರು ಪ್ರಶಸ್ತಿ ಪ್ರದಾನಿಸಿ ಮಾತನಾಡಿ, ಕೇಂದ್ರದ ಸಾಧನೆಯ ಬಗ್ಗೆ ಅಪಾರವಾದ ಹೆಮ್ಮೆ ಇದೆ. ತಂಡದ ಸಮರ್ಪಣೆ ಮತ್ತು ವೈದ್ಯರ ಪರಿಣತಿ ಸಾವಿರಾರು ಕುಟುಂಬಗಳಿಗೆ ಬೆಳಕು ನೀಡಿದೆ. ಇನ್​ ಸೈಟ್ಸ್​ ಕೇರ್​ನ ಈ ಪ್ರಶಸ್ತಿಯು ಅವರ ಕಠಿಣ ಪರಿಶ್ರಮ ಮತ್ತು ಒದಗಿಸಿದ ಸಹಾನುಭೂತಿಯ ಕಾಳಜಿಗೆ ಸಾಕ್ಷ್ಯವಾಗಿದೆ ಎಂದರು.

ಮಾಹೆ ಮಣಿಪಾಲದ ಸಿಒಒ ಸಿ.ಜಿ. ಮುತ್ತಣ್ಣ, ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್​ ವೇಣುಗೋಪಾಲ್​, ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್​ ಶೆಟ್ಟಿ ಹಾಗೂ ಮಾರ್ಕ್​ ತಂಡದವರು ಉಪಸ್ಥಿತರಿದ್ದರು. ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ. ಪ್ರತಾಪಕುಮಾರ್​ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾರ್ಕ್​ನ ಪ್ರಾಧ್ಯಾಪಕ ಮತ್ತು ಮುಖ್ಯ ಭ್ರೂಣಶಾಸ್ತ್ರಜ್ಞ ಡಾ. ಸತೀಶ್​ ಅಡಿಗ, ಪ್ರಾಧ್ಯಾಪಕ ಡಾ.ಪ್ರಶಾಂತ್​ ಕೆ. ಅಡಿಗ, ಸಹಪ್ರಾಧ್ಯಾಪಕಿಯರಾದ ಡಾ.ಅಂಜಲಿ ಎಸ್​. ಮುಂಡ್ಕೂರ್​, ಡಾ.ವಿದ್ಯಾಶ್ರೀ ಜಿ. ಪೂಜಾರಿ ಸೇರಿದಂತೆ ತಂಡದ ಇತರ ಪ್ರಮುಖ ಸದಸ್ಯರನ್ನು ವಿಶ್ವವಿದ್ಯಾಲಯ
ಮತ್ತು ಆಸ್ಪತ್ರೆಯ ಅಧಿಕಾರಿಗಳು ಅಭಿನಂದಿಸಿದರು.

ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ

ಮಣಿಪಾಲದ ಮಾರ್ಕ್​ ಕೇಂದ್ರವು ಪುರುಷ ಸಂತಾನಹೀನತೆಯ ಮೌಲ್ಯಮಾಪನಕ್ಕಾಗಿ ಸಂಪೂರ್ಣ ಸುಸಜ್ಜಿತ ಆಂಡ್ರಾಲಜಿ ಪ್ರಯೋಗಾಲ ಹೊಂದಿದೆ. ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಂಗ್ರಹಣೆಗಾಗಿ ವೀರ್ಯ ಬ್ಯಾಂಕಿಂಗ್​ ವ್ಯವಸ್ಥೆ ಹೊಂದಿದೆ. ಇದರ ಭ್ರೂಣಶಾಸ್ತ್ರ ಪ್ರಯೋಗಾಲಯವು ಅಂತಾರಾಷ್ಟ್ರೀಯ ಗುಣಮಟ್ಟ ಪೂರೈಸುವ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಕೇಂದ್ರವು ಫಲವತ್ತತೆ ವರ್ಧನೆಗಾಗಿ ಲ್ಯಾಪರೊಸ್ಕೋಪಿಕ್​ ಮತ್ತು ಹಿಸ್ಟರೊಸ್ಕೋಪಿಕ್​ ಶಸ್ತ್ರ ಚಿಕಿತ್ಸೆ ನೀಡುತ್ತದೆ. ಅಲ್ಲದೆ, ಆಂಕೊಫೆರ್ಟಿಲಿಟಿ ತಂತ್ರದ ಸೇವೆಯನ್ನೂ ಒದಗಿಸುತ್ತಿದೆ. ಮಕ್ಕಳನ್ನು ಪಡೆಯ ಬಯಸುವ ಅಸಂಖ್ಯಾತ ದಂಪತಿಗಳಿಗೆ ಇದು ಭರವಸೆಯ ದಾರಿದೀಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net