

ಮಸ್ಕಿ: ವಿಧಾನಸಭಾ ಚುನಾವಣೆಯಲ್ಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಮತ್ತೆ ಗೆಲ್ಲುವುದು ಖಚಿತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಹೇಳಿದರು.
ಹೂವಿನಬಾವಿ ಗ್ರಾಮದಲ್ಲಿ ಭಾನುವಾರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 20 ತಿಂಗಳ ಕಡಿಮೆ ಅವಧಿಗೆ ಶಾಸಕರಾದರೂ ಆರ್.ಬಸನಗೌಡ ತುರ್ವಿಹಾಳ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಭಾರಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಶಾಸಕರಿಂದ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದರು.
ವಿರೋಧ ಪಕ್ಷದ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಸಾಕಷ್ಟು ಅನುದಾನ ಸಿಗಲಿಲ್ಲ. ಇದರಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ತೊಡಕುಂಟಾಗಿದೆ. ಈ ಬಾರಿ ಶಾಸಕ ಬಸನಗೌಡ ತುರ್ವಿಹಾಳ ಕಳೆದ ಬಾರಿಗಿಂತ ಅತ್ಯಧಿಕ ಮತಗಳಿಂದ ಆಯ್ಕೆಯಾಗುತ್ತಾರೆ ಎಂದು ಮಲ್ಲಿಕಾರ್ಜುನ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಲೆ ಬೀಸಿದ್ದು ವಿರೋಧಿಗಳು ಏನೇ ಮಾಡಿದರೂ ಗೆಲುವು ನಮ್ಮದೇ ಎಂದು ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ತಿಳಿಸಿದರು. ವೆಂಕಟರಾಯ ಗೌಡ, ಬಸವರಾಜಪ್ಪ ಕಂದಗಲ್, ಗೋವಿಂದರಡ್ಡಿ, ಅಮರೇಗೌಡ ಸೇರಿ ಅನೇಕ ಬಿಜೆಪಿ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಮುಖಂಡ ವೆಂಕಟರಡ್ಡಿ ಹಾಲಾಪುರ ಇದ್ದರು.