ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು

Jewelry theft
Published on

ಶಿವಮೊಗ್ಗ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಎರಡು ಕುಟುಂಬಕ್ಕೆ ಕಳ್ಳರು ಶಾಕ್ ನೀಡಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಮನೆ ಬೀಗ ಮುರಿದು ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ನಗರದ ಪಿ ಆ್ಯಂಡ್ ಟಿ ಕಾಲನಿಯಲ್ಲಿ ಅಶ್ಚಿನಿ ಎಂಬುವರ ಮನೆಯಲ್ಲಿ 1.90 ಲಕ್ಷ ರೂ. ಮೌಲ್ಯದ 3.50 ಕೆಜಿ ಬೆಳ್ಳಿ ವಸ್ತುಗಳು, 17.56 ಲಕ್ಷ ರೂ. ಮೌಲ್ಯದ 366 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಅಶ್ವಿನಿ ಅವರು ಕುಟುಂಬದೊಂದಿಗೆ ತಮ್ಮ ತಾಯಿ ಮನೆಗೆ ತೆರಳಿದ್ದರು. ಬೆಳಗ್ಗೆ ಪಕ್ಕದ ಮನೆಯವರು ಅಶ್ವಿನಿ ಅವರಿಗೆ ಕರೆ ಮಾಡಿ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಬಂದು ನೋಡಿದಾಗ ಮನೆಯ ಗೇಟ್ ಬೀಗ ಮುರಿದು ಬಾಗಿಲಿನ ಇಂಟರ್ ಲಾಕ್ ಮೀಟಿ ತೆಗೆಯಲಾಗಿದ್ದು, ಒಳಗೆ ವಾರ್ಡ್‌ರೋಬ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವಿನೋಬನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ವಡ್ಡಿನಕೊಪ್ಪದ ಕರಿಯಪ್ಪ-ಯಶೋದಮ್ಮ ಎಂಬುವರ ಮನೆ ಬಾಗಿಲ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, 80 ಸಾವಿರ ರೂ. ನಗದು, ಒಂದುವರೆ ತೊಲ ಬಂಗಾರ ಕಳವು ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಸಂಬಂಧಿಕರ ಮನೆಗೆ ತೆರಳಿದ್ದಾಗ ಕಳ್ಳತನ ನಡೆದಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net