ಸಂಕೇಶ್ವರದಲ್ಲಿ ವ್ಯಾಪಾರಸ್ಥರ ಪ್ರತಿಭಟನೆ

2
ಸಂಕೇಶ್ವರ ಪಟ್ಟಣದಲ್ಲಿ ವ್ಯಾಪಾರ ನಡೆಸಲು ಅನ್ಯರಾಜ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಅವರಿಗೆ ವ್ಯಾಪಾರಸ್ಥರು ಮನವಿ ಸಲ್ಲಿಸಿದರು. ರಮೇಶ ಕತ್ತಿ, ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ ಇತರರಿದ್ದರು.
Published on

ಸಂಕೇಶ್ವರ: ಅನ್ಯರಾಜ್ಯ ವ್ಯಾಪಾರಸ್ಥರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದ್ದು, ಸ್ಥಳೀಯ ಆಡಳಿತ ಶೀಘ್ರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ಅಂಗಡಿಗಳ ಮಾಲೀಕರು, ವ್ಯಾಪಾರಸ್ಥರು ಬುಧವಾರ ಸ್ವಯಂಘೋಷಿತ ಬಂದ್ ಆಚರಿಸಿ ಪ್ರತಿಭಟನೆ ನಡೆಸಿದರು.

ರಾಜಸ್ಥಾನ ಸೇರಿ ಇತರ ರಾಜ್ಯದ ವ್ಯಾಪಾರಸ್ಥರು ಬಂದ ನಂತರ ಬಾಡಿಗೆ ದರ ಹೆಚ್ಚಳವಾಗಿವೆ. ಕಳಪೆ ವಸ್ತುಗಳನ್ನು ತಂದು ಕಲಬೆರಕೆ ವ್ಯಾಪಾರ ಮಾಡುತ್ತಿದ್ದು, ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಆಕ್ರೋಶ ವ್ಯಕ್ತ ಪಡಿಸಿದರು. ಬಾಡಿಗೆ ಮಳಿಗೆ ಮಾಲೀಕರು ಅವರಿಗೆ ಬಾಡಿಗೆ ಕೊಡಬಾರದು ಎಂದೂ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ಸ್ಥಳೀಯ ವ್ಯಾಪಾರಿಗಳು ಸ್ಪರ್ಧೆಗಿಳಿದು ಪೈಪೋಟಿ ನೀಡಬೇಕು. ಸ್ಥಳೀಯ ವ್ಯಾಪಾರಸ್ಥರು ಉಳಿಯಬೇಕಾದರೆ ಎಲ್ಲ ಸಾಮಗ್ರಿಗಳು ಒಂದೇ ಸೂರಿನಡಿ ಗ್ರಾಹಕರಿಗೆ ದೊರೆಯುವಂತೆ ಮಾಡಬೇಕು. ಹೊರರಾಜ್ಯದ ವ್ಯಾಪಾರಿಗಳು ಸ್ಥಳೀಯರಿಗೆ ತೊಂದರೆ ನೀಡಬಾರದು ಎಂದರು.

ವ್ಯಾಪಾರ ನಡೆಸಲು ಪರವಾನಿಗೆ ನೀಡುವಾಗ ಪರಿಶೀಲಿಸಿ ಪರವಾನಿಗೆ ನೀಡುವಂತೆ ಸ್ಥಳೀಯ ವ್ಯಾಪಾರಸ್ಥರು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಜೆ ಎಂದಿನಂತೆ ಅಂಗಡಿ ತೆರೆಯಲಾಯಿತು.

ಮುಖಂಡರಾದ ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಪುರಸಭೆ ಸದಸ್ಯರಾದ ಅಮರ ನಲವಡೆ, ಸಂಜಯ ಶಿರಕೋಳಿ, ಮುಖಂಡರಾದ ಶಂಕರಾವ ಹೆಗಡೆ, ಸುನೀಲ ಪರ್ವತರಾವ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net