

ಸಂಕೇಶ್ವರ: ಸಮೀಪದ ಸೋಲಾಪುರದಲ್ಲಿ ಎರಡು ಕೋಮುಗಳ ನಡುವೆ ಉಂಟಾದ ಗಲಾಟೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಭಾನುವಾರ ತಡರಾತ್ರಿ ದುರ್ಗಾಮಾತಾ ವಿಸರ್ಜನೆ ವೇಳೆ ಕೆಲ ಕಿಡಿಗೇಡಿಗಳ ನಡುವೆ ಆರಂಭವಾದ ಗಲಾಟೆ ತೀವ್ರ ಹಂತ ತಲುಪಿ ಗುಂಪು ಘರ್ಷಣೆ ಯಾಗಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯುವಕನೊಬ್ಬ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸೇರಿದಂತೆ ಇನ್ನಿತರ ವಾಹನಗಳು ಕಲ್ಲು ತೂರಾಟದಿಂದ ಜಖಂಗೊಂಡಿವೆ.
ಸ್ಥಳಕ್ಕಾಗಮಿಸಿದ ಸಂಕೇಶ್ವರ ಸಿಪಿಐ ಶಿವಶರಣ ಅವಜಿ ನೇತೃತ್ವದ ತಂಡ ವಾತಾವರಣ ತಿಳಿಗೊಳಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶಾಸಕ ನಿಖಿಲ್ ಕತ್ತಿ ಭೇಟಿ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಸೋಮವಾರ ಗ್ರಾಮಸ್ಥರು ಸಂಕೇಶ್ವರದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಶಾಸಕ ನಿಖಿಲ್ ಕತ್ತಿ ಭೇಟಿ ನೀಡಿ ಮಾತನಾಡಿ, ತಪ್ಪಿತಸ್ಥರ ಬಂಧನಕ್ಕೆ ಪೊಲೀಸರು ಒಂದು ವಾರದ ಅವಕಾಶ ಕೇಳಿದ್ದು, ಶೀಘ್ರವೇ ಬಂಧನ ಮಾಡಿ ಶಾಂತಿ ಸುವ್ಯವಸ್ಥೆ ನೆಲೆಸುವಂತಾಗಬೇಕು ಎಂದರು.
ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಶಶಿರಾಜ ಪಾಟೀಲ ಇತರರು ಇದ್ದರು.
ಸೋಲಾಪುರ ಗ್ರಾಮದಲ್ಲಿ ನಡೆದಿರುವ ಘಟನೆಗೆ ಮಾಜಿ ಸಂಸದ ರಮೇಶ ಕತ್ತಿ ಕಳವಳ ವ್ಯಕ್ತಪಡಿಸಿದ್ದು, ಹುಕ್ಕೇರಿ ತಾಲೂಕಿನ ಎಲ್ಲ ಜಾತಿ ಅಥವಾ ಕೋಮುಗಳು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದು, ಈ ಘಟನೆ ಬೆಳೆಯಲು ಅವಕಾಶ ನೀಡದೇ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ಕೆಲಸವಾಗಬೇಕು. ಎಲ್ಲ ಸಮುದಾಯಗಳು ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.