

ಬಾಗೇಪಲ್ಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೂಲಿ ಕಾರ್ಮಿಕರಿಗಾಗಿ ವಿನೂತನ ಕಾಯ್ದೆ ರೂಪಿಸಿ ಜಾರಿಗೆ ತಂದ ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ಊಗಲನಾಗೇಪಲ್ಲಿ ಗ್ರಾಮದ ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ ಆಯೋಜಿಸಿದ್ದ ನರೇಗಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾರತ ಕೌಶಲರಹಿತ ನಿರುದ್ಯೋಗಿಗಳಿಗೆ, ಕಾರ್ಮಿಕರಿಗೆ ಉದ್ಯೋಗ ಖಾತರಿಗೊಳಿಸಲು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸಲು 2006ರ ಫೆಬ್ರವರಿ 2ನೇ ತಾರೀಖಿನಂದು ನರೇಗಾ ಯೋಜನೆಯನ್ನು ದೇಶದಲ್ಲಿ ಅನುಷ್ಠಾನಕ್ಕೆ ತರಲಾಯಿತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾಯ್ದೆ ರೂಪಿಸಿ ಜಾರಿಗೆ ತಂದ ಈ ಯೋಜನೆ ಗ್ರಾಮೀಣಾಭಿವೃದ್ಧಿಯಲ್ಲಿ ಕ್ರಾಂತಿ ಉಂಟುಮಾಡಿದೆ. ಗ್ರಾಮ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸಿದೆ, ನರೇಗಾ ಯೋಜನೆ ಸಮರ್ಪಕ ಅನುಷ್ಠಾನ ಕಾಂಗ್ರೆಸ್ ಸರ್ಕಾರದ ಸಂಕಲ್ಪವಾಗಿದೆ ಎಂದರು.
ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ವಿಶೇಷವಾಗಿ ಕೃಷಿಹೊಂಡ, ದನದಕೊಟ್ಟಿಗೆ, ಜಮೀನಿನಲ್ಲಿ ಬದುಗಳ ನಿರ್ಮಾಣ, ಕಾಲುವೆ ನಿರ್ಮಾಣ ಸೇರಿದಂತೆ ಜಲಮೂಲಗಳ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಆದರೆ ಕೆಲವರು ನರೇಗಾ ಕೆಲಸಗಳಿಗೆ ಅಡ್ಡಿಪಡಿಸುವುದು ಸರಿ ಅಲ್ಲ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನರೇಗಾ ಯೋಜನೆ ಯಾವ ಗ್ರಾಮ ಪಂಚಾಯಿತಿ ಹೆಚ್ಚು ಅಭಿವೃದ್ಧಿ ಪಡಿಸಿದರೆ ಶಾಸಕರ ಅನುದಾನದಲ್ಲಿ ಹೆಚ್ಚುವರಿ 25 ಸಾವಿರ ರೂ. ನೀಡಲಾಗಿತ್ತು ಎಂದು ಹೇಳಿದರು.
ತಾಲೂಕು ಪಂಚಾಯತಿ ಇಒ ಕೆ.ವಿ. ರಮೇಶ್ ಮಾತನಾಡಿ, ಮನರೇಗಾ ಎನ್ನುವುದು ಕೇವಲ ಒಂದು ಯೋಜನೆಯಾಗಿರದೆ ಗ್ರಾಮೀಣರ ಪಾಲಿಗೆ ಕಲ್ಪವೃಕ್ಷವಾಗಿದೆ. 100 ದಿನಗಳ ಉದ್ಯೋಗ ಖಾತರಿ ನೀಡುವದಷ್ಟೇ ಅಲ್ಲದೆ, ರೈತರ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ಗ್ರಾಮಾಭಿವೃದ್ಧಿಗಾಗಿ ಸಮುದಾಯ ಕಾಮಗಾರಿಗಳನ್ನು ನೀಡುವ ಮೂಲಕ ಗ್ರಾಮೀಣರಿಗೆ ವರದಾನವಾಗಿದೆ ಎಂದು ತಿಳಿಸಿದರು.
25 ಗ್ರಾಮ ಪಂಚಾಯಿತಿಯಲ್ಲಿ ಉತ್ತಮವಾಗಿ ನರೇಗಾ ಅನುಷ್ಠಾನ ಮಾಡಿದ ಗ್ರಾಪಂ ಅಧಿಕಾರಿಗಳನ್ನು ಶಾಸಕರು ಸನ್ಮಾನಿಸಿದರು.
ತಾಲೂಕಿನ ಎಲ್ಲ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಗಳು, ಕಾರ್ಯದರ್ಶಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಹಾಗೂ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.