ಪಿಎಂಇಜಿಪಿಯಲ್ಲಿ ಬೆಳಗಾವಿ ಸೈ!

PMEGP
Published on

ಬೆಳಗಾವಿ: ದೇಶ ಅಭಿವೃದ್ಧಿ ಹೊಂದಲು ಕೈಗಾರಿಕೋದ್ಯಮ ಬೆಳೆಯಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಯುವ ಉದ್ಯಮಿಗಳಿಗೆ ಆರ್ಥಿಕ ಸಹಕಾರವೂ ಬೇಕು. ಆದರೆ, ಆರ್ಥಿಕ ಬಲವಿಲ್ಲದವರು ಉದ್ಯಮ ಕಟ್ಟಿ ಬೆಳೆಸುವುದು ಕಷ್ಟಸಾಧ್ಯ. ಪ್ರತಿಭೆ ಇದ್ದೂ ಹೊಸ ಸಾಹಸಕ್ಕೆ ಕೈಹಾಕಲು ಹಿಂಜರಿಯುವವರು ಹೊಸದಾಗಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸಾಲ ಸೌಲಭ್ಯ ಕಲ್ಪಿಸುವ ಪ್ರಧಾನಮಂತ್ರಿ ಉದ್ಯೋಗ ಸೃಜನೆ ಕಾರ್ಯಕ್ರಮ (ಪಿಎಂಇಜಿಪಿ) ಅನುಷ್ಠಾನದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ.

ಕಳೆದ ವರ್ಷ 162 ಹೊಸ ಕೈಗಾರಿಕೋದ್ಯಮಿಗಳಿಗೆ ಪಿಎಂಇಜಿಪಿ ಯೋಜನೆ ಮೂಲಕ ಸಾಲ ವಿತರಿಸುವುದಕ್ಕೆ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 750 ಜನರಿಗೆ ಸಾಲ ಸೌಲಭ್ಯ ಕಲ್ಪಿಸಿ, ಜಿಲ್ಲೆಯು ಗುರಿಗೂ ಮೀರಿ ಸಾಧನೆ ಮಾಡಿದೆ. ಈ ವರ್ಷವೂ (2023-24) 162 ಜನರಿಗೆ ಸಾಲ ಸೌಲಭ್ಯ ವಿತರಿಸುವ ಗುರಿ ಹಾಕಿಕೊಂಡಿತ್ತು. ಈ ಪೈಕಿ ಈಗಾಗಲೇ 189 ಜನರಿಗೆ ಯೋಜನೆ ಲಾಭ ಕಲ್ಪಿಸಿದ್ದು, ಗುರಿ ಮೀರಿ ಸಾಧನೆ ಮಾಡಿದೆ.

11 ದಿನದ ತರಬೇತಿ: ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೇಂದ್ರ ಸರ್ಕಾರದ ಖಾದಿ ಆಯೋಗಕ್ಕೆ ಯೋಜನೆ ಅನುಷ್ಠಾನ ಮಾಡುವ ಹೊಣೆಗಾರಿಕೆ ಇದೆ. ದಾಖಲೆಗಳು ಪರಿಶೀಲನೆಯಾದ ಬಳಿಕ, ದಾಖಲೆಗಳು ಸರಿ ಇವೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ ಬಳಿಕ ಕೇಂದ್ರ ಸರ್ಕಾರದ ಖಾದಿ ಆಯೋಗದಿಂದ ಕೈಗಾರಿಕೋದ್ಯಮಿಗಳಿಗೆ 11 ದಿನ ಆನ್‌ಲೈನ್ ತರಬೇತಿ ನಡೆಯುತ್ತದೆ. ತರಬೇತಿಯಲ್ಲಿ 11 ಜಿಎಸ್‌ಟಿ ಸೇರಿ ಉದ್ಯಮ ಹೇಗೆ ನಡೆಸಬೇಕು ಎನ್ನುವುದನ್ನು ತಿಳಿಸುತ್ತಾರೆ. ತರಬೇತಿ ಬಳಿಕ ಸಾಲ ಬಿಡುಗಡೆ ಮಾಡುತ್ತಾರೆ. ಕೈಗಾರಿಕೆ ಸ್ಥಾಪನೆಗೆ ಯಂತ್ರೋಪಕರಣ ಹಾಗೂ ಬಿಡಿ ಭಾಗಗಳನ್ನು ಎಲ್ಲಿ ಖರೀದಿ ಮಾಡಲಾಗುತ್ತದೆಯೋ ಅಲ್ಲಿ ಬ್ಯಾಂಕ್‌ನವರು ಡಿಡಿ ಕಳುಹಿಸುತ್ತಾರೆ. ಹೀಗೆ ಹಂತ ಹಂತವಾಗಿ ಬ್ಯಾಂಕ್‌ನಿಂದ ಸಾಲ ವಿತರಣೆಯಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಸಾಲ ವಿತರಣೆಯಾದ ಬಳಿಕ ಕೇಂದ್ರ ಸರ್ಕಾರದಿಂದ ಫಲಾನುಭವಿ ಖಾತೆಗೆ ಶೇ. 35 ಸಬ್ಸಿಡಿ ಬಿಡುಗಡೆಯಾಗುತ್ತದೆ. ಶೇ. 65 ಹಣಕ್ಕೆ ಮಾತ್ರ ಫಲಾನುಭವಿ ಬಡ್ಡಿ ಸಹಿತ ಕಂತು ಕಟ್ಟಬೇಕು. ಶೆ.65 ಹಣ ಸಾಲ ತೀರಿಸಿದರೆ ಶೇ.35 ಫಲಾನುಭವಿಗೆ ಸಬ್ಸಿಡಿ ದೊರೆಯಲಿದೆ.

ಏನಿದು ಯೋಜನೆ, ಅನುಷ್ಠಾನ ಹೇಗೆ?

ಕಚ್ಚಾ ವಸ್ತುಗಳಿಂದ ಪಕ್ಕಾ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳ ಸ್ಥಾಪನೆಗೆ ಹೊಸ ಕೈಗಾರಿಕೋದ್ಯಮಿಗಳಿಗೆ ಪಿಎಂಇಜಿಪಿ ಕಾರ್ಯಕ್ರಮದ ಮೂಲಕ 5 ಲಕ್ಷ ರೂ. ನಿಂದ 50 ಲಕ್ಷ ರೂ. ವರೆಗೆ ಸಾಲ ಸಾಲಭ್ಯ ಕಲ್ಪಿಸುವ ಯೋಜನೆ ಇದು. ಈ ಯೋಜನೆ ಲಾಭ ಪಡೆಯುವವರು 8ನೇ ತರಗತಿ ಉತ್ತೀರ್ಣರಾಗಿರಬೇಕು. ಕೈಗಾರಿಕೆ ಸ್ಥಾಪನೆಯ ಯೋಜನಾ ವರದಿ, ಅಗತ್ಯ ಯಂತ್ರೋಪಕರಣಗಳ ಕೊಟೇಶನ್, ಎಷ್ಟು ಮಾನವ ಸಂಪನ್ಮೂಲ ಅಗತ್ಯವಿದೆ ಎನ್ನುವ ಬಗ್ಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಗೆ ಸಮಗ್ರ ವರದಿಯೊಂದಿಗೆ ಅರ್ಜಿ ನೀಡಬೇಕು. ಬಳಿಕ ಈ ಕಚೇರಿಯಿಂದ ಅರ್ಜಿಯನ್ನು ಬ್ಯಾಂಕ್‌ಗೆ ಶಿಫಾರಸು ಮಾಡಲಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಯೋಜನಾ ವರದಿ ಪರಿಶೀಲಿಸುತ್ತಾರೆ. ಜತೆಗೆ ಉದ್ಯಮ ಸ್ಥಾಪಿಸುವ ಸ್ಥಳಕ್ಕೆ ಬಂದು ಪರಿಶೀಲಿಸುತ್ತಾರೆ. ಯೋಜನಾ ವರದಿ, ಬ್ಯಾಂಕ್ ಸಿಬಿಲ್ ಸ್ಕೋರ್ ಸೇರಿ ಎಲ್ಲ ದಾಖಲೆಗಳು ಸರಿ ಇದ್ದರೆ ಕೈಗಾರಿಕೆ ಆರಂಭಿಸುವುದಕ್ಕೆ ಸಾಲ ವಿತರಣೆ ಮಾಡುತ್ತಾರೆ.

ಕೆಲ ಅರ್ಜಿ ತಿರಸ್ಕಾರ

ಇಟ್ಟಿನ ಗಿರಣಿ ಹಾಕುವುದಕ್ಕೆ ಕೆಲವರು 20 ಲಕ್ಷ ರೂಪಾಯಿಯ ಯೋಜನಾ ವರದಿ ತಯಾರಿಸಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಇಂತಹ ಯೋಜನೆಗೆ ಇಷ್ಟೊಂದು ಸಾಲದ ಅಗತ್ಯವಿಲ್ಲ ಎಂದು ಅರ್ಜಿ ತಿರಸ್ಕರಿಸಿದ್ದಾರೆ. ಪ್ರೊಜೆಕ್ಟ್ ರಿಪೋರ್ಟ್ ಸರಿಯಿಲ್ಲದ ಇಂತಹ ಹಲವು ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಪಿಎಂಇಜಿಪಿ ಹೊಸ ಉದ್ಯಮಿಗಳಿಗೆ ನೆರವಾಗುತ್ತಿದೆ. ಯೋಜನಾ ವರದಿ ಸರಿ ಇದ್ದರೆ, 50 ಲಕ್ಷ ರೂ. ಮೊತ್ತದ ಉದ್ಯಮ ಸ್ಥಾಪನೆ ಮಾಡುವವರ ಬಳಿ 50 ಸಾವಿರ ರೂ. ಇದ್ದರೆ ಕೈಗಾರಿಕೆ ಸ್ಥಾಪಿಸಬಹುದು. ಕಾರ್ಯಕ್ರಮ ಅನುಷ್ಠಾನದಲ್ಲಿ ಬೆಳಗಾವಿ ಜಿಲ್ಲೆ ಮುಂದಿದೆ.| ಸತ್ಯನಾರಾಯಣ ಭಟ್ ಜಂಟಿ ನಿರ್ದೇಶಕ ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net