ನರೇಗಾದಲ್ಲಿ ಮಕ್ಕಳ ಬಳಸಿದರೆ ಕೇಸ್

19 DVD 03
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಖಾತ್ರಿ ಕೆಲಸದ ಸ್ಥಳಕ್ಕೆ ಕಾರ್ಮಿಕ ಇಲಾಖೆ ತಾಲೂಕು ಅಧಿಕಾರಿ ಮಲ್ಲಪ್ಪ ದೊರೆ ಭೇಟಿ ನೀಡಿ ಪರಿಶೀಲಿಸಿದರು. ಕೂಲಿಕಾರರಾದ ಬಸವರಾಜ, ಶಿವಕುಮಾರ, ನಾಗಪ್ಪ, ಅಂಬಪ್ಪ, ಬಸಪ್ಪ, ನಿಂಗಯ್ಯ, ಬೂದಯ್ಯ ಇತರರಿದ್ದರು.
Published on

ದೇವದುರ್ಗ: ಗ್ರಾಮೀಣ ಜನರ ಗುಳೆ ತಪ್ಪಿಸಲು ನರೇಗಾ ಯೋಜನೆ ಜಾರಿಗೊಳಿಸಿದ್ದು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕೆಲಸದಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಂಡರೆ ಕೇಸ್ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ನರೇಗಾ ಮೇಟಿಗಳಿಗೆ ಕಾರ್ಮಿಕ ಇಲಾಖೆ ತಾಲೂಕು ಅಧಿಕಾರಿ ಮಲ್ಲಪ್ಪ ದೊರೆ ಎಚ್ಚರಿಸಿದರು.

ತಾಲೂಕಿನ ಜಾಲಹಳ್ಳಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಸ್ಥಳಕ್ಕೆ ಭೇಟಿನೀಡಿ ಶುಕ್ರವಾರ ಪರಿಶೀಲಿಸಿದರು. ಕೆಲಸ ಮಾಡುತ್ತಿದ್ದ ಕೆಲ ಮಕ್ಕಳನ್ನು ಮನೆಗೆ ಕಳುಹಿಸಿ ಮೇಟಿಗಳು ಹಾಗೂ ಪಾಲಕರಿಗೆ ಎಚ್ಚರಿಕೆ ನೀಡಿದರು. 18ವಷರ್ದೊಳಗಿನ ಮಕ್ಕಳನ್ನು ಕೆಲಸಕ್ಕೆ ಕಳಿಸುವುದು ಮತ್ತು ಸೇರಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ.

ಕೆಲಸಕ್ಕೆ ಕಳುಹಿಸಿದ ಪಾಲಕರಿಗೂ ಹಾಗೂ ಕೆಲಸಕ್ಕೆ ಸೇರಿಸಿಕೊಂಡವರು ಅಪರಾಧಿಗಳಾಗುತ್ತಾರೆ. ಅಂಥವರ ವಿರುದ್ಧ ಬಾಲಕಾರ್ಮಿಕ ಕಾಯ್ದೆ ಪ್ರಕಾರ ಶಿಕ್ಷೆ ನೀಡಲಾಗುವುದು.

ನರೇಗಾ ಯೋಜನೆಯಡಿ ವಿವಿಧೆಡೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಎಲ್ಲ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲಸದಲ್ಲಿ ಮಕ್ಕಳು ಕಂಡುಬಂದರೆ ಕೆಲಸ ನೀಡಿದ ಮೇಟಿಗಳು, ಗ್ರಾಪಂ ಮಟ್ಟದ ಅಧಿಕಾರಿಗಳು, ಪಾಲಕರ ವಿರುದ್ಧ ಕೇಸ್ ದಾಖಲು ಮಾಡಲಾಗುವುದು. ಈ ಬಗ್ಗೆ ಮೇಟಿಗಳು ಪರಿಶೀಲಿಸಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net