

ನರಗುಂದ: ದೇಶಾದ್ಯಂತ ವೈದ್ಯಕೀಯ ಸಂಸ್ಥೆಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಜ್ಞಾನವನ್ನು ನೀಟ್ ಪರೀಕ್ಷೆ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಇಂತಹ ಮಹತ್ವದ ನೀಟ್-ಪಿಜಿ-2024ರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ (ಪೋಸ್ಟ್ ಗ್ರ್ಯಾಜುಯೇಶನ್) ಪರೀಕ್ಷೆಯಲ್ಲಿ ಪಟ್ಟಣದ ವಿದ್ಯಾರ್ಥಿಯೊಬ್ಬ ದೇಶಕ್ಕೆ 9ನೇ ರ್ಯಾಂಕ್ ಗಳಿಸಿ ಮಹತ್ವದ ಸಾಧನೆಗೈದಿದ್ದು ನರಗುಂದದ ಕೀರ್ತಿ ಹೆಚ್ಚಿಸಿದ್ದಾರೆ.
ನಗರದ ವಿವೇಕಾನಂದ ನಗರ ಬಡಾವಣೆ ನಿವಾಸಿ ಡಾ. ಶರಣಪ್ಪ ಶೀನಪ್ಪನವರ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿ. ಮೂಲತ: ತಾಲೂಕಿನ ವಾಸನ ಗ್ರಾಮದ ಡಾ. ಶರಣಪ್ಪ ಅವರ ತಂದೆ ಟಿ.ಆರ್. ಶೀನಪ್ಪನವರ ಅವರು, ಸದ್ಯ ಚಿಕ್ಕನರಗುಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 27 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಶಶಿಕಲಾ ಗೃಹಿಣಿ.
ಸಾಧಕ ಶರಣಪ್ಪ 1 ರಿಂದ 7ನೇ ತರಗತಿ ಪ್ರಾಥಮಿಕ ಶಿಕ್ಷಣವನ್ನು ತಮ್ಮ ತಂದೆ ಸೇವೆ ಸಲ್ಲಿಸುತ್ತಿದ್ದ ಜಗಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದರು. ನರಗುಂದ ಲಯನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ 8ರಿಂದ 10ನೇ ತರಗತಿ ಕಲಿತು ಶೇ. 92 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದರು. ಹುಬ್ಬಳ್ಳಿಯ ಚೇತನ ಕಾಲೇಜ್ನಲ್ಲಿ ಶೇ. 91.68 ಅಂಕ ಪಡೆದರು. ತದನಂತರ 2017ರಲ್ಲಿ ನಡೆದ ನೀಟ್-ಯುಜಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಚೇತನ್ ಕಾಲೇಜ್ಗೆ ಪ್ರಥಮ ಸ್ಥಾನ ಪಡೆದಿದ್ದರು. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್್ಸ) ನಲ್ಲಿ ಎಂಬಿಬಿಎಸ್ ಸರ್ಕಾರಿ ಪ್ರವೇಶಾತಿ ಪಡೆದು 2022ರಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. 2023ರ ಏಪ್ರಿಲ್ನಲ್ಲಿ ಇಂಟರ್ನ್ಶಿಫ್ ಪೂರ್ಣಗೊಳಿಸಿದ್ದರು. ಆದರೀಗ ನಿರಂತರ ಅಧ್ಯಯನ, ಸತತ ಪ್ರಯತ್ನದ ಫಲವಾಗಿ 2024ರ ಆಗಸ್ಟ್ 11ರಂದು ನಡೆದ ನೀಟ್-ಪಿಜಿ ಪರೀಕ್ಷೆಯಲ್ಲಿ ದೇಶಕ್ಕೆ 9ನೇ ರ್ಯಾಂಕ್ ಪಡೆದು ನರಗುಂದದ ಕೀರ್ತಿ ಪತಾಕೆ ಎಲ್ಲೆಡೆ ರಾರಾಜಿಸುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಂಡಿ ಜನರಲ್ ಮೆಡಿಸನ್ ಅಥವಾ ಎಂಡಿ ರೇಡಿಯಾಲಜಿ ಕ್ಷೇತ್ರದಲ್ಲಿ ವಿಶೇಷ ಅಧ್ಯಯನಗೈಯುವ ಬಯಕೆ ಹೊಂದಿದ್ದಾರೆ.
ಹೆತ್ತ ತಂದೆ-ತಾಯಿ ಹಾಗೂ ವಿದ್ಯೆ ಕಲಿಸಿದ ಗುರುವೃಂದದವರಿಂದ ದೇಶದ ಅತ್ಯುನ್ನತ ಸಾಧನೆ ಸಾಧ್ಯವಾಗಿದೆ. ಈ ಸಾಧನೆಯನ್ನು ತಂದೆ, ತಾಯಿ ಹಾಗೂ ಶಿಕ್ಷಕರಿಗೆ ಸಮರ್ಪಿಸುತ್ತೇನೆ. | ಡಾ.ಶರಣಪ್ಪ ಶೀನಪ್ಪನವರ ಸಾಧಕ ವಿದ್ಯಾರ್ಥಿ
ಸರ್ಕಾರಿ ಶಾಲೆ ಹಾಗೂ ಕನ್ನಡ ಮಾಧ್ಯಮದಲ್ಲಿ ಕಲಿಯಲು ಯಾರೊಬ್ಬರಿಗೂ ಹಿಂಜರಿಕೆ ಬೇಡ. ನಾನೊಬ್ಬ ಸರ್ಕಾರಿ ಶಾಲೆ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವಾಗಲೇ ನನ್ನ ಮಗನೂ ಕೂಡ ಸರ್ಕಾರಿ ಶಾಲೆಯಲ್ಲಿ ವಿಶೇಷವಾಗಿ ಕನ್ನಡ ಮಾಧ್ಯಮದಲ್ಲಿ ಕಲಿತು ಇಡೀ ದೇಶದಲ್ಲಿ ನರಗುಂದದ ಕೀರ್ತಿ ಹೆಚ್ಚಿಸಿರುವುದು ಅತೀವ ಸಂತಸವನ್ನುಂಟು ಮಾಡಿದೆ. | ಟಿ.ಆರ್. ಶೀನಪ್ಪನವರ ಸಾಧಕ ಶರಣಪ್ಪನ ತಂದೆ