

ಸಂಬರಗಿ: ಸಮೀಪದ ನಾಗನೂರ ಪಿಎ ಗ್ರಾಮದ ಶ್ರೀ ಬೀರಲಿಂಗೇಶ್ವರ ಸಿದ್ಧಾಶ್ರಮದಲ್ಲಿ ಸರೂರ-ಅಗತೀರ್ಥ ಹಾಲುಮತ ಗುರುಪೀಠದ ಪರಮಪೂಜ್ಯ ಶ್ರೀ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀ ಶಿವಸಿದ್ಧ ಮಹಾರಾಜರ ಸನ್ಯಾಸ ದೀಕ್ಷೆ ಹಾಗೂ ಪಟ್ಟಾಧಿಕಾರ ಮಹೋತ್ಸವ ಆ.11ರಂದು ಬ್ರಾಹ್ಮಿ ಮುಹೂರ್ತದಲ್ಲಿ ಜರುಗಲಿದೆ.
ಶಿವಸಿದ್ಧ ಮಹಾರಾಜರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ನಾಗನೂರು ಪಿಎದಲ್ಲಿ ಮುಗಿಸಿ, ಪ್ರೌಢಶಿಕ್ಷಣವನ್ನು ಸಂಬರಗಿಯಲ್ಲಿ ಕಲಿಯುವಾಗ ಶಿಕ್ಷಕರಾದ ಎ.ಟಿ.ಮಾಳಿ ಅವರು ಬೋಧಿಸಿದ ಬುದ್ಧನ ಸಂದೇಶದಿಂದ ಪ್ರಭಾವಿತರಾದರು.
ಬುದ್ಧನ ತ್ಯಾಗ ಮತ್ತು ವೈರಾಗ್ಯದ ತತ್ತ್ವಗಳು ಮಹಾರಾಜರ ಮೇಲೆ ಅಪಾರ ಪ್ರಭಾವ ಬೀರಿದವು. ಅಂದಿನಿಂದ ಮಹಾರಾಜರಲ್ಲಿ ವೈರಾಗ್ಯ ಭಾವ ತುಂಬಿ ಶ್ರೀ ಬೀರಲಿಂಗೇಶ್ವರ ಆಶ್ರಮದಲ್ಲಿ ಸುಮಾರು 12 ವರ್ಷಗಳ ಕಾಲ ದೀರ್ಘ ತಪಸ್ಸುಗೈದರು. ಅಪಾರವಾದ ಧ್ಯಾನ ಮತ್ತು ಪ್ರವಚನಗಳ ಮೂಲಕ ಭಕ್ತರ ಮನ ಗೆದ್ದರು. ಅಂತಹ ಶ್ರೀ ಶಿವಸಿದ್ಧ ಮಹಾರಾಜರ ಸನ್ಯಾಸ ದೀಕ್ಷೆ ಹಾಗೂ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ. ಭಕ್ತರೆಲ್ಲರೂ ಆಗಮಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕಾಗಬೇಕು ಎಂದು ಪಟ್ಟಾಧಿಕಾರ ಮಹೋತ್ಸವ ಸಮಿತಿ ಕೋರಿದೆ.
ಹುಲಜಂತಿಯ ಪಟ್ಟದ ಪೂಜಾರಿ ಮಹಾಳಿಂಗರಾಯ ಮಹಾರಾಜರು, ಕಾಜಿಬೀಳಗಿಯ ಕಾಶಿಲಿಂಗೇಶ್ವರ ಮಠದ ಮೃತ್ಯುಂಜಯ ಶಾಸ್ತ್ರಿಗಳು, ಜಂಬಗಿಯ ಸುರೇಶ ಮಹಾರಾಜರು ಉಪಸ್ಥಿತರಿರಲಿದ್ದಾರೆ.